

ಎಚ್.ಡಿ.ಕೋಟೆ: ಪಟ್ಟಣದ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಂವಿಧಾನದ ಪೀಠಿಕೆಯಲ್ಲಿರುವ ಭ್ರಾತೃತ್ವ ಕಾರ್ಯಕ್ರಮ ಇತ್ತೀಚೆಗೆ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕಿ ಪಿ.ಜೆ. ಬ್ರಿಜಿತ್, ಪ್ರಸ್ತುತ ಸಮಾಜದಲ್ಲಿ ಮಾನಸಿಕವಾಗಿ ತೊಂದರೆಯಾದ ವ್ಯಕ್ತಿಗಳಿಗೆ, ಅಂಗವಿಕಲರಿಗೆ, ಭಿಕ್ಷುಕರಿಗೆ, ಅಲೆಮಾರಿಗಳಿಗೆ ಹಾಗೂ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಾವು ನೆರವಾಗಬೇಕು. ಈ ಸಂದೇಶ ಸಾರಲು ನಮ್ಮ ಶಾಲೆಯಲ್ಲಿ ಸಂವಿಧಾನ ಪೀಠಿಕೆಯಲ್ಲಿ ಅಳವಡಿಕೆಯಾಗಿರುವ ಭ್ರಾತೃತ್ವ ಕಲ್ಪನೆಯಡಿ ಇತರರನ್ನು ಸಹೋದರ ಸಹೋದರಿಯಂತೆ ಕಾಣುವ ಉದ್ದೇಶದಿಂದ ಭ್ರಾತೃತ್ವ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಕಷ್ಟದಲ್ಲಿರುವವರಿಗೆ ನಾವು ನೆರವಾಗಬೇಕೆಂಬ ಸಂದೇಶ ಸಾರಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಈ ಸಂದೇಶ ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಸಹ ಶಿಕ್ಷಕ ಎಂ.ಕುಮಾರ್ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಹೋದರತ್ವ ಸಂದೇಶ ಸಾರುವ ವಿವಿಧ ಕಾರ್ಯಕ್ರಮಗಳು ನಡೆದವು. ಅಂಗವಿಕಲರಿಗೆ, ಅಲೆಮಾರಿಗಳಿಗೆ, ನಿರ್ಗತಿಕರಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ಹೇಗೆ ನೆರವಾಗಬೇಕು ಎಂಬುದರ ಬಗ್ಗೆ ನೃತ್ಯ ರೂಪಕ, ನಾಟಕ, ಏಕಪಾತ್ರಾಭಿನಯ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮದ ಸಂದೇಶ ಸಾರಿದರು.
ಸಹ ಶಿಕ್ಷಕರಾದ ಕಾಂತರಾಜು, ಪ್ರಸನ್ನಕುಮಾರ್, ಸಂದೇಶ್, ಸ್ವಾಮಿಗೌಡ, ಭಾರ್ಗವಿ, ಆಶಾ ಪವಿತ್ರಾ, ಸುಕನ್ಯಾ, ಮಣಿ ಮಿಸ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.