ವ್ಯಾಪಾರ ಮಾಡಿ ಸೈ ಎನಿಸಿಕೊಂಡ ಮಕ್ಕಳು

HUN-FEB-28-4(DEVAGALLI SCHOOL PROGRAMME)
ಹುಣಸೂರು ತಾಲೂಕು ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನದ ವಿವಿಧ ಮಾದರಿಗಳ ಕುರಿತು ಗಣ್ಯರಿಗೆ ಮಾಹಿತಿ ನೀಡಿದರು.
Published on

ಹುಣಸೂರು: ಮಕ್ಕಳ ಸಂತೆಯಲ್ಲಿ ವ್ಯಾಪಾರಿ ಮನೋಭಾವನೆ ತೋರಿದ ವಿದ್ಯಾರ್ಥಿಗಳು.. ವಿಜ್ಞಾನ ದಿನಾಚರಣೆಯಲ್ಲಿ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದ ಪುಟಾಣಿ ವಿಜ್ಞಾನಿಗಳು.. ಚುರುಮುರಿ ತಿಂದು ಸಂಭ್ರಮಿಸಿದ ಮಕ್ಕಳು.. ಪಾಲಕರಿಗಾಗಿ ಆಯೋಜಿಸಿದ್ದ ಆಟೋಟಗಳಲ್ಲಿ ಸಂತಸದಿಂದ ಭಾಗವಹಿಸಿದ್ದ ಹಿರಿಯರು..

ತಾಲೂಕಿನ ಗಡಿಗ್ರಾಮ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಝಲಕ್ ಇದಾಗಿದೆ. ಹುಣಸೂರು- ಎಚ್.ಡಿ.ಕೋಟೆ ತಾಲೂಕುಗಳ ಗಡಿಯಲ್ಲಿರುವ ಪುಟ್ಟ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕಿ ಶಶಿಕಲಾ ಮತ್ತವರ ತಂಡದ ಕ್ರಿಯಾಶೀಲ ಆಲೋಚನೆಗಳಿಂದಾಗಿ ಕುಗ್ರಾಮದ ಪುಟ್ಟ ಮಕ್ಕಳ ಪ್ರತಿಭೆ ಹೊರಜಗತ್ತಿಗೆ ಕಾಣುತ್ತಿದೆ.

ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪವನ ವಿದ್ಯುತ್, ಸೌರಶಕ್ತಿಯ ಮೂಲಕ ನೀರಿನ ಶುದ್ಧೀಕರಣ, ಋತುಗಳು ಹೇಗೆ.. ಏನು?, ಶ್ವಾಸಾಂಗವ್ಯೆಹ ಎಂದರೇನು, ಸೋಲಾರ್ ಇರಿಗೇಶನ್ ಸೇರಿದಂತೆ ಅನೇಕ ಮಾದರಿಗಳನ್ನು ತಯಾರಿಸಿ ಆಗಮಿಸಿದ್ದ ಗಣ್ಯರಿಗೆ ಆಕರ್ಷಕವಾಗಿ ವಿವರಿಸಿ ಸೈ ಎನಿಸಿಕೊಂಡರು. ವಿಜ್ಞಾನ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಆಹಾರ ಮೇಳದಲ್ಲಿ ಪೋಷಕಾಂಶಗಳನ್ನು ಪರಿಚಯಿಸುವ ತರಕಾರಿಗಳ ಮೂಲಕ ಬೇಯಿಸದೇ ಬಳಸಬಹುದಾದ ಹಣ್ಣು ಮತ್ತು ಕಾಳುಗಳ ಸಲಾಡ್‌ಗಳ ಕುರಿತು ಮಾಹಿತಿ ನೀಡಿದರು. ರೊಟ್ಟಿ ತಟ್ಟಿದರು. ಹಳ್ಳಿಯೂಟ ಬಡಿಸಿದರು. ಜತೆಯಲ್ಲಿ ಮಕ್ಕಳಿಗೆ ಇಷ್ಟವಾಗುವ ಚುರುಮುರಿ ತಯಾರಿಸಿ ಮಾರಾಟ ಮಾಡಿ ತಿಂದು ಸವಿದರು.

ಮಕ್ಕಳ ಸಂತೆಯಲ್ಲಿ ಸೊಪ್ಪು, ತರಕಾರಿಗಳು, ಈರುಳ್ಳಿ ಮುಂತಾದವುಗಳನ್ನು ಕೂಗಿ ಕರೆದು ಮಾರಾಟ ಮಾಡಿ ಸೈ ಎನಿಸಿಕೊಂಡರು. ಗಣಿತ, ವಿಜ್ಞಾನದ ವಿವಿಧ ವಿಷಯಗಳ ಚಾರ್ಟ್‌ಗಳನ್ನು ತಯಾರಿಸಿ ವಿವರಣೆ ನೀಡಿದರು. ಪಾಲಕರು ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇಡೀ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಕಂಡುಬಂದಿತ್ತು.

ಪಿಡಿಒ ಮಂಜುಳಾ, ಅಂಚಲ್ ಮೈಸೂರು ಸಮಿತಿ ಉಪಾಧ್ಯಕ್ಷ ಕುಂಟೇಗೌಡ, ಏಕಲ್ ಸಂಸ್ಥೆಯ ರಾಜ್ಯ ಸಂಚಾಲಕ ಗೋವಿತ್ ಕಿರಣ್, ಅಕ್ಷರ ಫೌಂಡೇಷನ್‌ನ ಶೇಷಾದ್ರಿ, ಗ್ರಾ.ಪಂ. ಸದಸ್ಯೆ ಮೀನಾಕ್ಷಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಸದಸ್ಯರಾದ ಶಾಂತಾ, ರೇಣುಕಾ, ಶೈಲಜಾ, ಮೋಹನ್‌ಕುಮಾರ್, ಸಿದ್ದಲಿಂಗಯ್ಯ, ರತ್ನಮ್ಮಣ್ಣಿ, ನಾಗರಾಜೇ ಅರಸ್, ಮಲ್ಲರಾಜೇ ಅರಸ್, ಗೋಪಾಲರಾಜೇ ಅರಸ್, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net