

ಮಾಗಡಿ : ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು, ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗಬಾರದು ಎಂದು ಚಿಕ್ಕಮುದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಹೇಳಿದರು.
ತಾಲೂಕಿನ ಚಿಕ್ಕಮುದಿಗೆರೆ ಗ್ರಾಪಂ ವತಿಯಿಂದ ಕಲ್ಕೆರೆ ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಬಾರದು. ಮಕ್ಕಳ, ಮಹಿಳೆಯರ ಶ್ರೋಯೋಭಿವೃದ್ಧಿಗೆ ಸಾಕಷ್ಟು ಕಾನೂನುಗಳು ಜಾರಿಯಲ್ಲಿವೆ, ಆದರೂ ಬಾಲ ಕಾರ್ಮಿಕರ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ಇಂದಿಗೂ ನೋಡುತ್ತಿದ್ದೇವೆ. ಇವುಗಳನ್ನು ಹೋಗಲಾಡಿಸಲು ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದರೆ ಗ್ರಾಪಂ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ವಿಷಯ ತಿಳಿಸುವಂತೆ ಮನವಿ ಮಾಡಿದರು.
ಪಿಡಿಒ ಶಿವಕುಮಾರ್ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳ ಬಳಿ ಮದ್ಯಪಾನ, ಧೂಮಪಾನ ಮಾಡುವುದು ಅಪರಾಧ. ಈ ರೀತಿಯ ಘಟನೆಗಳು ಶಾಲಾ ಆವರಣಗಳಲ್ಲಿ ಕಂಡುಬಂದರೆ ಗ್ರಾಪಂಗೆ ಅರ್ಜಿ ನೀಡಿಬೇಕು. ನಾವು ಅದನ್ನ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ನೀಡಿ ಅಂತಹವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
ಅಂಗನವಾಡಿ, ಶಾಲೆಗಳ ದುರಸ್ತಿ, ಹಾಗೂ ಶೌಚಗೃಹ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ಸಭೆ ಗಮನಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆ. ಹಂತ, ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ, ಅದಕ್ಕೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಗ್ರಾಪಂ ಬದ್ಧ ಎಂದರು.
ಮಕ್ಕಳ ಹಕ್ಕುಗಳು, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಬಾಲ್ಯ ವಿವಾಹ ತಡೆಗಟ್ಟುವಿಕೆ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಅರಿವು, ಶಾಲೆ ಬಿಟ್ಟ ಮಕ್ಕಳ ಕುರಿತು, ಶಿಶು ಮರಣ ತಡೆಯುವುದು, ಮಕ್ಕಳ ಆರೋಗ್ಯದ ಬೆಳವಣಿಗೆಗೆ ಪೌಷ್ಟಿಕ ಆಹಾರ ಒದಗಿಸುವ ಬಗ್ಗೆ, ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಕುರಿತು, ವೈಯಕ್ತಿಕ ಶೌಚಗೃಹ ನಿರ್ಮಾಣದ ಮಹತ್ವ, ಲಿಂಗ ತಾರತಮ್ಯ ತಡೆಗಟ್ಟುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ನೋಡಲ್ ಅಧಿಕಾರಿ ಚಂದ್ರಶೇಖರ್, ಉಪಾಧ್ಯಕ್ಷೆ ಸಾವಿತ್ರಮ್ಮ, ಸಂಪನ್ಮೂಲ ವ್ಯಕ್ತಿ ಗಂಗಹನುಮಯ್ಯ, ಸದಸ್ಯರಾದ ಗಂಗಾಧರಯ್ಯ, ಎಸ್. ರಂಗನಾಥ, ಕೆ.ಆರ್.ಗಂಗರಾಜು, ಪಾರ್ವತಮ್ಮ, ಕೆ.ಆರ್.ರವಿಕುಮಾರ್, ಪ್ರಮಿಳಾ, ನರಸಮ್ಮ, ಗೋವಿಂದಯ್ಯ, ಜಿ.ಪ್ರೇಮಾವತಿ, ಜಯರಾಮೇಗೌಡ, ಭವ್ಯವೆಂಕಟೇಶ್ ಇದ್ದರು.