ಮಕ್ಕಳಿಂದ ಬಗೆಬಗೆಯ ತಿನಿಸು ಮಾರಾಟ

ಮಕ್ಕಳಿಂದ ಬಗೆಬಗೆಯ ತಿನಿಸು ಮಾರಾಟ
Published on

ಕಿಕ್ಕೇರಿ: ಮಂದಗೆರೆಯ ಜಗನ್ನಾಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಸಂಭ್ರಮದಿಂದ ಮಕ್ಕಳ ಸಂತೆ ಆಚರಿಸಿದರು.

ಶುಕ್ರವಾರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಂತೆಯಲ್ಲಿ ಬಗೆಬಗೆಯ ತಿಂಡಿ ತಿನಿಸುಗಳ ಮಾರಾಟ ಜೋರಾಗಿತ್ತು. ಮನೆಯಿಂದ ತಯಾರಿಸಿಕೊಂಡು ತಂದ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಯಿತು. ತಿಂಡಿ ತಿನಿಸು, ತಂಪು ಪಾನಿಯಗಳು, ಐಸ್ ಕ್ರೀಮ್, ಹಣ್ಣುಗಳು, ಪಾನಿಪೂರಿ, ಗೋಬಿ, ಬಿರಿಯಾನಿ, ಕಬಾಬ್, ತಾಜಾ ತರಕಾರಿಗಳ ಮಳಿಗೆಯನ್ನೆ ಶಾಲೆಯಲ್ಲಿ ತೆರೆದಿದ್ದರು.

ಬನ್ನೀ ಅಕ್ಕ, ಅಣ್ಣ ಎಂದು ಕರೆಯುತ್ತ ವ್ಯಾಪಾರದ ಎಲ್ಲ ಕಸರತ್ತುಗಳನ್ನು ಬಳಸಿಕೊಂಡು ಗಿರಾಕಿಗಳನ್ನು ಸೆಳೆದರು. ಪರಸ್ಪರ ಪೈಪೋಟಿಯಲ್ಲಿ ವ್ಯಾಪಾರಕ್ಕೆ ಇಳಿದು ದೊಡ್ಡವರಿಗಿಂತ ತಾವು ಕಡಿಮೆ ಇಲ್ಲವೆಂದು ಸಾಬೀತುಪಡಿಸಿದರು. ಶಿಕ್ಷಕರು, ಪಾಲಕರು, ಮಕ್ಕಳಿಂದ ವ್ಯಾಪಾರದ ವಸ್ತುಗಳನ್ನು ಚೌಕಾಸಿ ಮಾಡುವ ಮೂಲಕ ಖರೀದಿಸಿದರು.

ವ್ಯಾಪಾರದಲ್ಲಿನ ಕರಾರು ಲೆಕ್ಕಾಚಾರ, ಗ್ರಾಹಕರ ಆಕರ್ಷಣೆ ಮಾಡುವ ಶೈಲಿ, ಅಳತೆ, ತೂಕ ಮಾಪನಗಳಲ್ಲಿ ಸರಿಯಾಗಿ ತೂಗುವುದನ್ನು ಕಂಡು ಪಾಲಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಕ್ಕಳು ಪ್ರದರ್ಶಿಸಿದ ಲೆಕ್ಕಾಚಾರವನ್ನು ಸರಳವಾಗಿ ಮಾಡುವುದು, ಗುಣಿಸುವಿಕೆ, ಭಾಗಿಸುವಿಕೆಯಲ್ಲಿನ ಸರಳ ಸೂತ್ರ, ವಿವಿಧ ಆಕೃತಿ, ಪ್ರಾಣಿಗಳ ಪ್ರಬೇಧ, ಜೀವವೈವಿಧ್ಯತೆ ಕುರಿತು ಹಲವು ಮಾದರಿಗಳು ಆಕರ್ಷಿಸಿದವು.

ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಮುರಳೀಧರ್, ಕಾರ್ಯದರ್ಶಿ ಮೋಹನ್‌ಬಾಬು, ಖಜಾಂಚಿ ನವೀನ್, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ಗೋವಿಂದೇಗೌಡ, ನಾಗೇಶ್, ಮುಖ್ಯ ಶಿಕ್ಷಕ ಮುಕುಂದಸ್ವಾಮಿ, ಶಿಕ್ಷಕ ಯೋಗೇಶ್, ಇಂದ್ರೇಶ್, ನಂದೀಶ್, ಚಂದ್ರಕಲಾ, ಸುಮಾ, ನಯನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net