ಶಿಕ್ಷಕ ವರ್ಗಾವಣೆ ಖಂಡಿಸಿ ಮಕ್ಕಳ ಪ್ರತಿಭಟನೆ

20 yelandur 01
Published on

ಯಳಂದೂರು: ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಹೋಬಳಿಯ ಹೆಗ್ಗವಾಡಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆ ಮಾಡಿರುವ ಕ್ರಮ ಖಂಡಿಸಿ ಶಾಲಾ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದು ಪಾಲಕರೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ರೈತ ಮುಖಂಡ ಮಹೇಶ್‌ಕುಮಾರ್ ಮಾತನಾಡಿ, ಈ ಶಾಲೆಯಲ್ಲಿ ಒಟ್ಟು 32 ಮಕ್ಕಳಿದ್ದಾರೆ. ನಾಲ್ವರು ಶಿಕ್ಷಕರು ಈ ಶಾಲೆಯಲ್ಲಿ ಇದ್ದಾರೆ. ಇಲ್ಲಿನ ಆಂಗ್ಲ ಭಾಷೆಯನ್ನು ಬೋಧಿಸುವ ಶಿಕ್ಷಕ ಕಿಶೋರ್ ಹೆಚ್ಚುವರಿ ಶಿಕ್ಷಕರಾಗಿರುವ ಕಾರಣ ಇವರನ್ನು ವರ್ಗಾವಣೆಗೆ ಇಲಾಖೆಯಿಂದ ಆದೇಶ ಬಂದಿದೆ. ಉತ್ತಮ ಶಿಕ್ಷಕರಾಗಿರುವ ಇವರು ಮಕ್ಕಳ ನೆಚ್ಚಿನವರಾಗಿದ್ದಾರೆ. ಆದರೆ ಹೆಚ್ಚುವರಿ ಶಿಕ್ಷಕ ಎಂಬ ಕಾರಣ ನೀಡಿ ಏಕಾಏಕಿ ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕ ಕಿಶೋರ್ ಬೇರೆಡೆ ವರ್ಗಾವಣೆಗೊಂಡರೆ ಇಲ್ಲಿನ ಮಕ್ಕಳು ಶಾಲೆ ಬಿಡುತ್ತಾರೆ. ನಮ್ಮ ಗ್ರಾಮದಲ್ಲಿ ಶಾಲೆ ಉಳಿಸಿಕೊಳ್ಳಲು ಮಕ್ಕಳ ದಾಖಲಾತಿ ಅನಿವಾರ್ಯ. ಈಗ ಇರುವ ಶಿಕ್ಷಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಶಾಲೆಯಲ್ಲಿ ಕಲಿಕೆಗೆ ಬೇಕಾಗುವ ಎಲ್ಲ ವಾತಾವರಣವನ್ನು ನಿರ್ಮಿಸಿದ್ದಾರೆ. ನಮ್ಮ ಮಕ್ಕಳು ಇಂಗ್ಲಿಷ್ ಮಾತನಾಡಲು ಇವರು ನೆರವಾಗಿದ್ದಾರೆ. ಅಲ್ಲದೆ ಮಕ್ಕಳು ಇವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹಾಗಾಗಿ ಹೆಚ್ಚುವರಿಯಾಗಿ ಇವರನ್ನು ವರ್ಗಾವಣೆಗೊಳಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಇವರು ಇಲ್ಲೇ ಕರ್ತವ್ಯ ನಿರ್ವಹಿಸುವಂತೆ ಕ್ರಮ ವಹಿಸಬೇಕು ಎಂಬುದು ಇಲ್ಲಿನ ಮಕ್ಕಳು ಹಾಗೂ ಪಾಲಕರ ಬೇಡಿಕೆಯಾಗಿದ್ದು, ಗ್ರಾಮಸ್ಥರ ಮನವಿಯೂ ಇದಾಗಿದೆ. ಹಾಗಾಗಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಿಇಒ ಹನುಮಶೆಟ್ಟಿ ಮಾತನಾಡಿ, ಸರ್ಕಾರದಿಂದ ಇನ್ನೂ ಕೂಡ ಈ ಬಗ್ಗೆ ಆದೇಶವಾಗಿಲ್ಲ. ಹೆಚ್ಚುವರಿ ಶಿಕ್ಷಕರನ್ನು ತೆಗೆಯುವ ವಿಚಾರ ಉನ್ನತ ಮಟ್ಟದ ಇಲಾಖೆಯ ಅಧಿಕಾರಿಗಳದ್ದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಕ್ರಮ ವಹಿಸಬೇಕಿದೆ. ನಾನು ಸಂಬಂಧಪಟ್ಟ ಇಲಾಖೆಯ ನಿರ್ದೇಶಕರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದರು.

ಗ್ರಾಪಂ ಸದಸ್ಯ ಶಿವಕುಮಾರ್, ಮಹೇಶ್, ಇಸಿಒ ರೇವಣ್ಣ, ಸಂತೆಮರಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ತಾಜುದ್ದೀನ್, ಪೇದೆ ರಮೇಶ್, ಗ್ರಾಪಂ ಪಿಡಿಒ ಮಮತಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net