ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯ

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯ
Published on

ಹಿರೀಸಾವೆ: ಮಕ್ಕಳ ಮನಸ್ಸು ಸ್ವಚ್ಛ ಹಾಗೂ ತಿಳಿಯಾದ ನೀರಿನಂತೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಬೃಹತ್ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ತಿಳಿ ನೀರಿಗೆ ಗಂಧ ಬೆರೆಸಿದರೆ ಪರಿಮಳ ಸೂಸುತ್ತದೆ. ಆದರೆ ಅದೇ ನೀರಿಗೆ ಕೆಸರು ಸೇರಿಸಿದರೆ ಇನ್ನಿಲ್ಲದ ದುರ್ನಾತ ಬೀರುತ್ತದೆ. ಗಂಧ ಬೆರೆಸಿದ ನೀರು ಅಭಿಷೇಕದ ರೂಪದಲ್ಲಿ ದೇವರ ಪಾದ ಸೇರಿದರೆ, ಕೆಸರಿನ ನೀರು ಯಾವುದಕ್ಕೂ ಸಲ್ಲುವುದಿಲ್ಲ ಎಂದರು.

ಹಾಗೆಯೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಪಡೆದು ಗುರು-ಹಿರಿಯರಿಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದುಕೊಡಲಿದ್ದಾರೆ. ಇನ್ನು ಸಂಸ್ಕಾರವನ್ನೇ ಕಾಣದವರು ಜನಸಮೂಹದ ನಡುವೆ ಅನಾಗರಿಕರಂತೆ ಬದುಕಬೇಕಾಗಲಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ಶಾಲೆಯಲ್ಲಿ ಸಿಗುವ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ಸಹ ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ ಹಾಗೂ ಸಂಸ್ಕಾರ ಕಲಿಸುವುದು ಅಗತ್ಯವಿದೆ ಎಂದರು.

ತಮ್ಮ ಮಕ್ಕಳು ಬೆಳೆದ ಮೇಲೆ ಏನಾಗಬೇಕು ಎಂಬುದರ ಬಗ್ಗೆಯೇ ಸದಾಕಾಲ ಚಿಂತೆ ಮಾಡುವ ಬಹುತೇಕ ಪಾಲಕರು ಚಿಕ್ಕಂದಿನಿಂದಲೇ ಹೇಗೆ ಬೆಳೆಸಬೇಕು ಎನ್ನುವ ಬಗ್ಗೆ ಎಂದಿಗೂ ಚಿಂತನೆ ಮಾಡುವುದಿಲ್ಲ. ಅತ್ತ ಶಿಕ್ಷಿಸಲು ಭಯ ಇತ್ತ ಪ್ರೀತಿಸುವುದು ಹೇಗೆ ಎಂಬ ಅಂಜಿಕೆಗೆ ಸಿಲುಕಿಕೊಂಡಂತಿದೆ ಎಂದರು.

ಮಕ್ಕಳಿಗೆ ಸುಳ್ಳನ್ನು ಹೇಳಿಕೊಡುವುದೇ ನಾವು. ಆದರೆ, ಬೆಳೆದು ನಿಂತ ಮೇಲೆ ಸತ್ಯವಂತನಾಗಬೇಕು ಎಂದುಕೊಳ್ಳುವುದು ನಮಗೆ ನಾವೇ ತಂದುಕೊಳ್ಳುವ ಶಿಕ್ಷೆ. ನಾವು ಮನೆಯಲ್ಲಿರುವ ನಮ್ಮ ಹಿರಿಯ ಜೀವಗಳನ್ನು ಗೌರವಿಸಿದರೆ ತಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ವೃದ್ಧಾಪ್ಯದ ವೇಳೆ ನಮ್ಮನ್ನು ಗೌರವದಿಂದಲೇ ನೋಡಿಕೊಳ್ಳುತ್ತಾರೆ. ಇಲ್ಲವಾದಲ್ಲಿ ನಾವು ಮಾಡಿದ ಪಾಪಕಾರ್ಯ ನಮಗೆ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಪಾಲಕರಿಗೆ ಎಚ್ಚರಿಸಿದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಕ್ಷೇತ್ರ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥಸ್ವಾಮೀಜಿ, ಓಹೀಲೇಶ್ ಲಕ್ಷ್ಮಣ್, ಬಿ.ಆರ್.ಬೊಮ್ಮೇಗೌಡ, ಸೆಸ್ಕ್ ಅಭಿಯಂತರ ಎಂ.ಡಿ.ನಾಗೇಶ್, ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಶಿಕ್ಷಕರು ಪಾಲಕರು ಇದ್ದರು.

ಇಂದಿನ ಕಾರ್ಯಕ್ರಮಗಳು: ನ.11ರಂದು ಬೆಳಗ್ಗೆ ಶ್ರೀ ಬಸವೇಶ್ವರಸ್ವಾಮಿಗೆ ವಿವಿಧ ಅಭಿಷೇಕ ಹಾಗೂ ವಿಶೇಷ ಅಲಂಕಾರದ ಜತೆಗೆ ಪೂಜಾ ಕೈಂಕರ್ಯಗಳು ನೆರವೇರಲಿವೆ. ಸಂಜೆ ಶ್ರೀ ಬಸವೇಶ್ವರಸ್ವಾಮಿ ಸರ್ಪೋತ್ಸವ, ಶ್ರೀ ಚೌಡೇಶ್ವರಿ ದೇವಿ ಉತ್ಸವ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಮತ್ತು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ, ಸನ್ನಿಧಿಯ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ಹಾಗೂ ರಾತ್ರಿ ಧಾರ್ಮಿಕ ಸಭೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net