

ಹನೂರು: ತಾಲೂಕಿನ ಕೌದಳ್ಳಿ ಸರ್ಕಾರಿ ಪ್ರೌಢಶಾಲೆಯ ಬಳಿ ಬಸ್ ನಿಲುಗಡೆಯಾಗದ ಪರಿಣಾಮ ಇಲ್ಲಿನ ವಿದ್ಯಾರ್ಥಿಗಳು ಬಸ್ ನಿಲ್ದಾಣದಿಂದ ಶಾಲೆಗೆ ನಿತ್ಯವೂ ನಡೆದುಕೊಂಡೇ ತೆರಳುತ್ತಿದ್ದಾರೆ.
ಬಸ್ ನಿಲುಗಡೆ ಇಲ್ಲದ ಪರಿಣಾಮ ಮಕ್ಕಳ ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದೆ. ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯ ಬದಿಯಲ್ಲಿ ಕೌದಳ್ಳಿ ಪ್ರೌಢಶಾಲೆ ಇದ್ದು, ಕೌದಳ್ಳಿ, ವಡಕೆಹಳ್ಳ, ಬಿದರಹಳ್ಳಿ, ಎಂ.ಜಿ. ದೊಡ್ಡಿ, ಸತ್ತಾರಮೇಡು ಗ್ರಾಮಗಳ ಮಕ್ಕಳು ಇಲ್ಲಿಗೆ ಕಲಿಕೆಗೆ ಬರುತ್ತಾರೆ. ಒಟ್ಟು 104 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಾಲೆಯ ಬಳಿ ಬಸ್ ನಿಲ್ಲಿಸದ ಪರಿಣಾಮ ಮಕ್ಕಳು ಬಸ್ ನಿಲ್ದಾಣದಿಂದ ನಿತ್ಯ 2 ಕಿ.ಮೀ. ನಡೆದುಕೊಂಡು ಬರಬೇಕಾಗಿದೆ.
ಮಲೇಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ನೂರಾರು ಸಾರಿಗೆ ಬಸ್‌ಗಳು ತೆರಳುತ್ತವೆ. ಈ ಮಾರ್ಗದಲ್ಲಿ ಬಸ್‌ಗಳ ಕೊರತೆಯೇನು ಇಲ್ಲ. ಶಾಲೆಯ ಬಳಿ ಬಸ್ ನಿಲ್ಲಿಸದಿರುವುದು ಸಮಸ್ಯೆಯಾಗಿದೆ. ಜಾತ್ರೆ ಸಮಯದಲ್ಲಿ ಶಾಲಾ ಮಕ್ಕಳನ್ನು ಬಸ್‌ಗೆ ಹತ್ತಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಇದೆ. ಮಕ್ಕಳು ಖಾಸಗಿ ಬಸ್‌ಗಳ ಮೊರೆ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಸಂಜೆ ಶಾಲೆ ಬಿಟ್ಟನಂತರವೂ ಮಳೆ ಬಿಸಿಲಿನಲ್ಲೂ 2 ಕಿಮೀ ನಡೆದುಕೊಂಡು ಹೋಗಿ ಬಸ್ ಹತ್ತ ಬೇಕಾಗಿದೆ.
ಗಮನಹರಿಸದ ಅಧಿಕಾರಿಗಳು: ಮಕ್ಕಳು ನಿತ್ಯ ಅನುಭವಿಸುತ್ತಿರುವ ತೊಂದರೆಯನ್ನು ಮನಗಂಡಿರುವ ಇಲ್ಲಿನ ಶಿಕ್ಷಕರು ಶಾಲೆಯ ಬಳಿ ಕೋರಿಗೆ ಮೇರೆಗೆ ಬಸ್ ನಿಲುಗಡೆ ಮಾಡುವುದರ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸುವಂತೆ ಕಳೆದ ಹಲವು ವರ್ಷಗಳಿಂದಲೂ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆಯನ್ನು ಅನುಭವಿಸುಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅನುಕೂಲ ಕಲ್ಪಿಸಬೇಕು ಎಂಬೂದು ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರ ಒತ್ತಾಯವಾಗಿದೆ.