ಬಾಲ್ಯವಿವಾಹ ತಪ್ಪಿಸಿದ ಸಹಾಯವಾಣಿ ಕರೆ

Child Marriage
Published on

ಮಾಗಡಿ: ತಾಲೂಕಿನ ಕರ‌್ಲಹಳ್ಳಿ ಬಸವೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಸಿಡಿಪಿಒ ಬಿ.ಎಲ್.ಸುರೇಂದ್ರ ಮತ್ತು ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ.

ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮದ ನಿವಾಸಿ ನಾರಾಯಣ ಮತ್ತು ಭಾಗ್ಯಮ್ಮ ಎಂಬುವರ ಪುತ್ರ ಎಚ್.ಎನ್. ಶ್ರೀನಿವಾಸ (24) ಅವರೊಂದಿಗೆ ಹಾಲುವಾಗಿಲು ತಾರೆಮರೆಪಾಳ್ಯ ಗ್ರಾಮದ 17 ವರ್ಷದ ಅಪ್ರಾಪ್ತೆ ಜತೆ ಮದುವೆ ನಿಶ್ಚಯವಾಗಿ ನ.9 ಮತ್ತು 10ರಂದು ಮದುವೆಗೆ ಬೇಕಾದ ತಯಾರಿ ನಡೆದಿತ್ತು. ಹುಡುಗಿ ಮತ್ತು ಹುಡುಗನ ಕಡೆಯ ಸಂಬಂಧಿಕರು, ಸ್ನೇಹಿತರು ಮತ್ತು ಬಂಧು ಮಿತ್ರರು ಕಲ್ಯಾಣ ಮಂಟಪಕ್ಕೆ ಬಂದು ಆರತಕ್ಷತೆ ನಡೆಸಲು ತಯಾರಿ ನಡೆಸಿದ್ದರು.

ಈ ನಡುವೆ ಮಕ್ಕಳ ಸಹಾಯವಾಣಿ ಸಂಖ್ಯೆ 112ಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಬಿ.ಎಲ್.ಸುರೇಂದ್ರ ಮೂರ್ತಿ ಅವರು ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಗಂಡು, ಹೆಣ್ಣಿನ ಕಡೆಯವರು ಕಾಲು ಕಿತ್ತಿದ್ದಾರೆ. ಈ ವೇಳೆ ಮದುವೆ ಸಮಾರಂಭಕ್ಕೆ ತಂದಿದ್ದ ಅಡುಗೆ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ವಾಪಸ್ ತೆಗದುಕೊಂಡು ಹೋಗಿದ್ದು ಮದುವೆಗೆ ಬಂದಿದ್ದ ಸಂಬಂಧಿಕರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾಗಿದ್ದಾರೆ.

ಹಾಲುವಾಗಿಲು ತಾರೆಮರೆಪಾಳ್ಯ ಗ್ರಾಮದ ಅಪ್ರಾಪ್ತೆಯ ಹೆತ್ತವರು ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ವಾಸವಾಗಿದ್ದು, ನ.10ರಂದು ಸಿಡಿಪಿಒ ಮತ್ತು ಸಿಬ್ಬಂದಿ ಅವರ ನಿವಾಸಕ್ಕೆ ತೆರಳಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವಂತೆ ತಂದೆ, ತಾಯಿ, ಹುಡುಗಿ, ಹುಡುಗನಿಗೆ ನೋಟಿಸ್ ನೀಡಿದ್ದಾರೆ. ಕರ‌್ಲಹಳ್ಳಿ ಬಸವೇಶ್ವರಸ್ವಾಮಿ ಸಮುದಾಯ ಭವನದ ಆಡಳಿತ ಹುಡುಗಿಯ ವಯಸ್ಸಿನ ಬಗ್ಗೆ ಮಾಹಿತಿ ಪಡೆಯದೆ ಮದುವೆಗೆ ಸಮುದಾಯ ಭವನ ನೀಡಿರುವ ಹಿನ್ನೆಲೆಯಲ್ಲಿ ಬಾಲ್ಯವಿವಾಹ ಕಾಯ್ದೆ ಅಡಿ ದೂರು ದಾಖಲಿಸುವ ಬಗ್ಗೆ ನೋಟಿಸ್ ನೀಡಲಾಗಿದೆ.

ಮಕ್ಕಳ ಸಹಾಯವಾಣಿಯ ಅಭಿಲಾಷ್, ಪವಿತ್ರಾ, ಮೇಲ್ವಿಚಾರಕಿ ಜಯಲಕ್ಷ್ಮಮ್ಮ, ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net