ಮಕ್ಕಳಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ

12--kkr1(6-25
Published on

ಕಿಕ್ಕೇರಿ: ಆಡುತ್ತಾ, ಓದುತ್ತಾ ನಲಿದಾಡುವ ವಯಸ್ಸಿನ ಮಕ್ಕಳ ಕೈಗೆ ಕೆಲಸ ನೀಡಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಹಾಗೂ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿನ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಕನ್ನಡ ಕಲಾ ಸಂಘ ಗುರುವಾರ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡತನ, ಅನಕ್ಷರತೆ ನೆಪದಲ್ಲಿ ಮಕ್ಕಳನ್ನು ಕೂಲಿ ಮಾಡಲು ಕಾರ್ಮಿಕರಂತೆ ದುಡಿಸಿಕೊಳ್ಳಬಾರದು. 14 ವರ್ಷದೊಳಗಿನ ಮಕ್ಕಳನ್ನು ದುಡಿಯಲು ಕಳಿಸುವುದು ಶಿಕ್ಷಾರ್ಹ ಅಪರಾಧ. ಗ್ಯಾರೇಜ್, ಹೋಟೆಲ್, ಕಾರ್ಖಾನೆ ಮತ್ತಿತರ ಸ್ಥಳಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಅಡ್ಡಿಯಾದ ಅನಿಷ್ಟ ಪದ್ಧತಿ ದೂರಮಾಡಲು ಎಲ್ಲರೂ ಸಹಕರಿಸಿ ಎಂದರು.

ಬಾಲಪರಾಧಿಗಳನ್ನು ಸಂರಕ್ಷಣೆ ಮಾಡಲು ಪುರ್ನವಸತಿ ಕೇಂದ್ರವಿದೆ. ಮಕ್ಕಳನ್ನು ದುಡಿಮೆ ಮಾಡಿಸಿಕೊಳ್ಳುವುದು ಜೀತಪದ್ಧತಿಯಂತಿದೆ. ಅರಿಯದ ಕಂದಮ್ಮಗಳನ್ನು ದುಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಮಕ್ಕಳ ಬದುಕು ಮಾರಕವಾಗಲಿದೆ ಎಂದರು.

ಮಕ್ಕಳು ಸಮಾಜದ ಅಸ್ತಿ. ಮಕ್ಕಳಿಗೆ ಶಿಕ್ಷಣವನ್ನು ಶಕ್ತಿಯಾಗಿ ನೀಡಿ. ಭವಿಷ್ಯದ ಮಕ್ಕಳ ವಿಕಾಸನಕ್ಕೆ ಆಟ, ಪಾಠವೇ ಮದ್ದು. ಓದುವ ಕೈಗೆ ಕೂಲಿ ಕೆಲಸ ನೀಡಿದರೆ ಬದುಕು ಕತ್ತಲೆಯಾಗಲಿದೆ. ಮುಂದೆ ಬದುಕಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.

ಮಕ್ಕಳಿಗೆ ಕಟ್ಟೋಣ ನಾಡನ್ನು ಕಟ್ಟೋಣ ನಾವು ನೀವು ಸೇರಿ, ಎದ್ದೇಳಿ ಮಕ್ಕಳೇ ಸನ್ನದ್ದರಾಗಿ ರಕ್ಷಿಸಿರಿ, ಅಮ್ಮ ಅಮ್ಮ ತೋಳಿಗೆ ರೆಕ್ಕೆ ಹಚ್ಚು, ಕಲಿಸಬೇಕು ವಿದ್ಯೆ ಕಲಿಸಬೇಕು ವಿದ್ಯೆ, ಬಡತನ ಮೌಢ್ಯ ತೊಲಗಿ ಬೆಳಸಬೇಕು ಮತ್ತಿತರ ಗೀತೆಗಳನ್ನು ಹೇಳಿಕೊಟ್ಟು ಸುಶ್ರಾವ್ಯವಾಗಿ ಹಾಡಿಸಿ ಖುಷಿಪಡಿಸಿದರು.

ವಿದ್ಯಾರ್ಥಿಗಳು ಅನಿಷ್ಟ ಪದ್ಧತಿ ದೂರಮಾಡಲು ಸಹಕರಿಸುವುದಾಗಿ ಪ್ರತಿಜ್ಞೆ ಮಾಡಿದರು. ಟ್ರಸ್ಟಿ ತ್ರಿವೇಣಿ, ಸಮಾಜ ಸೇವಕ ಚೌಡಗೋನಹಳ್ಳಿ ಮಹೇಂದ್ರ, ಕವಿತಾ, ಮಂಜುಳಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net