

ಕೊಪ್ಪಳ: ಬಾಲ್ಯವಿವಾಹ, ಮಕ್ಕಳ ದೌರ್ಜನ್ಯ, ಮಕ್ಕಳ ಹಕ್ಕುಗಳ ಉಲ್ಲಂಘನೆ ಮೊದಲಾದ ಕಾರ್ಯಕ್ರಮಗಳಿಗಾಗಿ ರೂಪುಗೊಂಡಿರುವ ಮಕ್ಕಳ ಸಹಾಯವಾಣಿ ಇನ್ಮುಂದೆ ನೇರವಾಗಿ ಇಲಾಖೆಯಿಂದ ನಿರ್ವಹಣೆಯಾಗಲಿದೆ. 1098 ಸಂಖ್ಯೆ ಜತೆಗೆ 112 ಸಹಾಯವಾಣಿ ಬೆಸುಗೆಗೆ ಇಲಾಖೆ ಮುಂದಾಗಿದ್ದು, ಜೂ.19ರಿಂದ ಎರಡೂ ಸಂಖ್ಯೆಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ಮಕ್ಕಳ ಸಂಬಂಧಿತ ದೂರು ದಾಖಲಿಸಬಹುದು.
ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯ ವಿವಾಹ ತಡೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಕಳೆದೆರೆಡು ದಶಕದ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ರಕ್ಷಣಾ ಘಟಕ ಆರಂಭಿಸಲಾಗಿದೆ. ಘಟಕವು ಮಕ್ಕಳ ರಕ್ಷಣೆ ಕಾರ್ಯ ನಿರ್ವಹಿಸುತ್ತಿದೆ. ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆವ ಜಿಲ್ಲೆಗಳ ಪೈಕಿ ಕೊಪ್ಪಳವೂ ಮೊದಲೆರೆಡು ಸ್ಥಾನಗಳಲ್ಲಿ ಗುರುತಿಸಿಕೊಂಡಿತ್ತು.
ಅಧಿಕಾರಿಗಳ ಕಾರ್ಯಕ್ಷಮತೆ, ಸಾರ್ವಜನಿಕರ ಸಹಕಾರದಿಂದ ಸದ್ಯ ಬಾಲ್ಯವಿವಾಹಗಳು ಗಣನೀಯವಾಗಿ ಕಡಿಮೆಯಾಗಿವೆ. ಶಾಲಾ ಮಕ್ಕಳು ಹೆಚ್ಚು ಜಾಗೃತರಾಗಿದ್ದು, ವಯಸ್ಕರಾಗುವ ಮುನ್ನ ಮದುವೆ ಮಾಡಲು ಮುಂದಾದಲ್ಲಿ 1098 ಸಹಾಯವಾಣಿ ಮೂಲಕ ನೆರವು ಪಡೆಯುತ್ತಿದ್ದಾರೆ. ಹೀಗಾಗಿ ಬಾಲ್ಯ ವಿವಾಹದ ಯತ್ನಗಳನ್ನು ಬೇಧಿಸುವಲ್ಲಿ ಅಧಿಕಾರಿಗಳಿಗೆ ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕವಿದ್ದರೂ 1098 ಮಕ್ಕಳ ಸಹಾಯವಾಣಿಯನ್ನು ಖಾಸಗಿ ಸಂಸ್ಥೆ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಕಳೆದ 11 ವರ್ಷದಿಂದ ಯೋಜನೆ ನಡೆಯುತ್ತಿದ್ದು, ಒಟ್ಟು 9 ಸಿಬ್ಬಂದಿ ಗೌರವ ಧನ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯ ಮಕ್ಕಳ ರಕ್ಷಣಾ ಘಟಕದಿಂದಲೇ ಕಾರ್ಯನಿರ್ವಹಣೆಗೆ ಇಲಾಖೆ ಮುಂದಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಪ್ರತ್ಯೇಕ ವಿಭಾಗ ಸೃಜಿಸಲಾಗುತ್ತಿದೆ. ಸಹಾಯವಾಣಿ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ಇರಲಿದ್ದು, ಇಲ್ಲಿಂದಲೇ ಇನ್ಮುಂದೆ ಎಲ್ಲ ಕಾರ್ಯಚಟುವಟಿಕೆಗಳು ನಡೆಯಲಿವೆ. ಜೂ.19ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಇಲಾಖೆ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಜಿಲ್ಲಾ ಕೇಂದ್ರದಲ್ಲೇ ಕಚೇರಿ ಇರಬೇಕಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿದೆ. ಇಲ್ಲಿಯೇ ಎರಡು ಕೊಠಡಿಗಳನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಮಕ್ಕಳ ಸಂಬಂಧಿತ ಪ್ರಕರಣಗಳ ನಿರ್ವಹಣೆಗೆ ಅನುಕೂಲವಾಗಲಿದೆ. ಸದ್ಯ ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೇರೆಡೆ ಇದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಭೆ, ಸಮಾರಂಭ, ತನಿಖಾ ಕಾರ್ಯ ಇನ್ನಿತರ ಕಚೇರಿ ಸಂಬಂಧಿತ ಕೆಲಸಗಳು ವಿಳಂಬವಾಗುತ್ತಿವೆ. ಎಲ್ಲವನ್ನೂ ಒಂದೇ ಸೂರಿನಡಿ ಕೇಂದ್ರೀಕರಿಸುವುದರಿಂದ ಪ್ರಕರಣಗಳ ವಿಲೇವಾರಿ, ಪರಿಹಾರ ಇನ್ನಷ್ಟು ಸುಲಭವಾಗಲಿದೆ ಎಂಬುದು ಇಲಾಖೆ ಲೆಕ್ಕಾಚಾರ.
ಮಕ್ಕಳ ಸಹಾಯವಾಣಿ ಎಂದಾಕ್ಷಣ 1098 ಟೋಲ್ ಫ್ರೀ ಸಂಖ್ಯೆ ನೆನಪಿಗೆ ಬರುತ್ತದೆ. ಅದನ್ನು ಏಕಾಏಕಿ 112ಗೆ ಬದಲಾಯಿಸಿದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಬಹುದು. ಸದ್ಯ 112 ಸಹಾಯವಾಣಿ ಮೂಲಕ ಬಹುಪಾಲು ತುರ್ತು ಕರೆಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಮಕ್ಕಳ ಸಂಬಂಧಿತ ಕರೆಗಳು ಬಂದಾಗ ಜಿಲ್ಲಾ ಮಟ್ಟದಲ್ಲಿ ಆಯಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲಾಗುತ್ತಿತ್ತು. ಇನ್ನು ಮುಂದೆ ಎರಡೂ ಸಹಾಯವಾಣಿಗಳು ಮುಂದುವರಿಯಲಿವೆ. 112ಗೆ ಕರೆ ಬಂದಲ್ಲಿ ಕೇಂದ್ರ ಕಚೇರಿಯಿಂದಲೇ 1098ಗೆ ಸಂಪರ್ಕ ಏರ್ಪಟ್ಟು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ವರ್ಗವಾಗಲಿದೆ. ಇದರಿಂದ ಸಾಕಷ್ಟು ಅನುಕೂಲಗಳಾಗಲಿವೆ.
ಎನ್‌ಜಿಒ ಮೂಲಕ ನಿರ್ವಹಣೆಯಾಗುತ್ತಿರುವ ಮಕ್ಕಳ ಸಹಾಯವಾಣಿ ಜೂನ್ 19ರಿಂದ ಸಂಪೂರ್ಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಬರಲಿದೆ. ಹೀಗಾಗಿ ಯೋಜನೆ ಆರಂಭದಿಂದಲೂ ಕಡಿಮೆ ಗೌರವಧನದ ಪಡೆದು ಸೇವೆ ಸಲ್ಲಿಸುತ್ತಿರುವ ನೌಕರರು ಆತಂಕದಲ್ಲಿದ್ದಾರೆ. ಸದ್ಯ ಆರು ತಂಡದ ಸದಸ್ಯರು, ತಲಾ ಒಬ್ಬ ಸ್ವಯಂ ಸೇವಕ, ಆಪ್ತ ಸಮಾಲೋಚಕ, ಜಿಲ್ಲಾ ಸಂಯೋಜಕರು ಕೆಲಸ ಮಾಡುತ್ತಿದ್ದಾರೆ. ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಸಹಾಯವಾಣಿ ನಿರ್ವಹಣೆಗಾಗಿ ಪ್ರತ್ಯೇಕ ವಿಭಾಗ ರಚಿಸಿದರೂ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ ಬೇಕಿದೆ. ಘಟಕದಲ್ಲಿ 11 ಜನರ ತಂಡ ಕೆಲಸ ನಿರ್ವಹಿಸುತ್ತಿದ್ದು, ಅವರಿಂದಲೇ ಸಹಾಯವಾಣಿ ನಿರ್ವಹಣೆ ಕಷ್ಟ. ಹೀಗಾಗಿ ಸಹಾಯವಾಣಿ ಸಿಬ್ಬಂದಿಯನ್ನೇ ಮುಂದುವರಿಸಿದಲ್ಲಿ ಇಲಾಖೆಗೂ ಅನುಕೂಲವಾಗಲಿದೆ. ಇಲಾಖೆಯೂ ಇದೇ ಚಿಂತನೆಯಲ್ಲದ್ದರೂ ಈ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಸಿಬ್ಬಂದಿ ಆತಂಕ ಪಡುವಂತಾಗಿದೆ.