ಚಿಕ್ಕಕೆರೆಯೂರಿನ ಕೆರೆ ಪುನಶ್ಚೇತನಕ್ಕೆ ಚಾಲನೆ

22HDK0003
Published on

ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಚಿಕ್ಕಕೆರೆಯೂರು ಗ್ರಾಮದ ತಾವರೆಕೆರೆ ಸಮಿತಿ ಸಹಯೋಗದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡ್ಲಿ ಗ್ರಾಮದ ತಾವರೆಕೆರೆ ಹೂಳೆತ್ತುವ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.

ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿ.ವಿಜಯ್‌ಕುಮಾರ್ ಮಾತನಾಡಿ, ಚಿಕ್ಕಕೆರೆಯೂರು ಗ್ರಾಮದ ತಾವರೆಕೆರೆಯು ಐತಿಹಾಸಿಕವಾಗಿ ಮಹತ್ವದ್ದಾಗಿದ್ದು, ಇದರ ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ತಾವರೆಕೆರೆ ಸಮಿತಿ ಸಹಯೋಗದಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಒಂದು ಕೆರೆಯು ಇಡೀ ಗ್ರಾಮವನ್ನು ಸಾಕುತ್ತದೆ. ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಕೆರೆಯಿಂದ ತೆಗೆದ ಹೂಳು ರೈತರು ಜಮೀನಿಗೆ ಹಾಕಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಅಧಿಕ ಫಸಲು ನೀಡಬಹುದು. ಹಾಗಾಗಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೂಳು ಕೊಂಡೊಯ್ಯಬೇಕು ಎಂದರು.

ಕೆರೆಯಲ್ಲಿ ಹೂಳು ತೆಗೆಯುವುದರಿಂದ ಕೆರೆಯ ಸುತ್ತಮುತ್ತಲ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ವೃದ್ಧಿಸಲಿದೆ. ಅಲ್ಲದೆ ಕೆರೆಯಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವೂ ವೃದ್ಧಿಸಲಿದೆ ಎಂದರು.

ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಕೆಂಡಗಣ್ಣೇಗೌಡ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಗ್ರಾಮಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಸಹಾಯಧನ ಸಿಕ್ಕಿದೆ. ಇದರೊಂದಿಗೆ ಇದೀಗೆ ಕೆರೆ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತಾಲೂಕು ಯೋಜನಾಧಿಕಾರಿ ವಿ.ಭಾಸ್ಕರ್, ಕೆರೆ ಅಭಿಯಂತರ ಪುಷ್ಪರಾಜು, ಕೃಷಿ ಮೇಲ್ವಿಚಾರಕ ಬಿ.ಜೆ.ರಾಜು, ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶಂಕರ್, ತಾವರೆಕೆರೆ ಸಮಿತಿ ಅಧ್ಯಕ್ಷ ವಿಜೇಂದ್ರಗೌಡ, ಉಪಾಧ್ಯಕ್ಷ ಸಂಗರಾಜು, ಸದಸ್ಯರಾದ ರವಿ.ಸಿ.ಎನ್. ನಾಗೇಗೌಡ, ಸಿದ್ದಪ್ಪಾಜಿ, ರಾಮ, ಕುಮಾರ್, ಸಿ.ಕೆ.ರವಿ., ನಾಗೇಂದ್ರ, ಮಂಜೇಗೌಡ, ಐಟಿ ಪ್ರಬಂಧಕರಾದ ಮಂಜು, ಯೋಗೇಶ್, ವಿಮಾ ಸಮನ್ವಯ ಅಧಿಕಾರಿ ಚೇತನ್ ಕುಮಾರ್, ಸೇವಾ ಪ್ರತಿನಿಧಿ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net