

ಸಮಸ್ಯೆಗಳಿಂದ ಹೊರತಾಗಿಲ್ಲ ವಾರ್ಡ್ ನಂ.1
ಅಂದ ಕೆಡಿಸುತ್ತಿರುವ ರಾಜಕಾಲುವೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಇತ್ತ ಹಳ್ಳಿಯೂ ಅಲ್ಲ.., ಅತ್ತ ಸಿಟಿಯೂ ಅಲ್ಲ. ಆದರೆ, ನಗರಸಭೆಯ ಮೊದಲ ವಾರ್ಡ್ ಎಂಬ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಪಂಚಕೋಶ ಮಹಾಕ್ಷೇತ್ರ ಎಂದು ಕರೆಯಲ್ಪಡುವ ನಗರಸಭೆಯ ಒಂದನೇ ವಾರ್ಡ್‌ನ ಚಿಕ್ಕಮಳೂರಿನಲ್ಲಿ ಸಮಸ್ಯೆಗಳು ಸಹ ದೊಡ್ಡಮಟ್ಟದಲ್ಲಿವೆ.
ಕಣ್ವ ನದಿಯ ದಡದಲ್ಲಿರುವ ಈ ವಾರ್ಡ್ ನಗರಸಭೆಯ ವಿಶೇಷ ವಾರ್ಡ್‌ಗಳಲ್ಲಿ ಒಂದು. ಇಂದಿಗೂ ಗ್ರಾಮೀಣ ಸೊಗಡನ್ನು ತನ್ನ ಮಡಿಲಿನಲ್ಲಿಟ್ಟುಕೊಂಡಿರುವುದು ವಿಶೇಷ. ದಿನ ಕಳೆದಂತೆ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುತ್ತಿರುವ ಈ ವಾರ್ಡ್ ಕೊಂಚ ಪ್ರಮಾಣದ ಅಭಿವೃದ್ಧಿ ಕಂಡಿದ್ದರೂ, ಇನ್ನು ಸಾಕಷ್ಟು ಅಭಿವೃದ್ಧಿ ಕಾಣಬೇಕಿದೆ. ಈ ವಾರ್ಡ್ ವ್ಯಾಪ್ತಿಯ ಚಿಕ್ಕಮಳೂರು ಸೇರಿ ಹಲವು ಕಡೆ ಸಾಕಷ್ಟು ಸಮಸ್ಯೆಗಳು ಇಂದಿಗೂ ತಾಂಡವವಾಡುತ್ತಿವೆ.
ಚಿಕ್ಕಮಳೂರು ಗ್ರಾಮಕ್ಕೆ ಪುರಾಣ ಪ್ರಸಿದ್ಧ ಹಿನ್ನೆಲೆಯಿದೆ. ಈ ಗ್ರಾಮವನ್ನು ಪಂಚಕೋಶ ಮಹಾಕ್ಷೇತ್ರ ಎಂದೂ ಕರೆಯುತ್ತಾರೆ. ಐದು ವಿಷ್ಣು ಹಾಗೂ ಐದು ಶಿವಾಲಯಗಳು ಇರುವ ಕಾರಣಕ್ಕೆ ಈ ಹೆಸರು ಬಂದಿದೆ. ಗ್ರಾಮದಲ್ಲಿರುವ ಪುರಾತನ ಹಿನ್ನೆಲೆಯ ವೇಣುಗೋಪಾಲಸ್ವಾಮಿ ದೇಗುಲ ಸೇರಿ ಎಲ್ಲ ದೇವಾಲಯಗಳು ಅಭಿವೃದ್ಧಿಯನ್ನು ಕಾಣಬೇಕಿದೆ. ವಾರ್ಡ್ ವ್ಯಾಪ್ತಿಯಲ್ಲಿ ಹಾದುಹೋಗಿರುವ ಬೃಹತ್ ರಾಜಕಾಲುವೆ ಈ ವಾರ್ಡ್‌ನ ಅಂದವನ್ನು ಕೆಡಿಸುತ್ತಿದೆ.
ಈ ರಾಜಕಾಲುವೆಯನ್ನು ತುರ್ತಾಗಿ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ನಗರಸಭೆ ವತಿಯಿಂದ ಈ ಹಿಂದೆ ಕಣ್ವ ನದಿಯ ಪಕ್ಕದಲ್ಲಿ ನಿರ್ಮಿಸಿರುವ ಕಿರು ಉದ್ಯಾನವನ ಹಾಳುಕೊಂಪೆಯಾಗಿ ಬದಲಾಗಿದ್ದು, ಇದು ಕೂಡ ಅಭಿವೃದ್ಧಿ ಕಾಣಬೇಕಿದೆ. ಇದರೊಂದಿಗೆ, ಸರ್ವ ಜನಾಂಗ ವಾಸಿಸುತ್ತಿರುವ ಈ ಗ್ರಾಮ ಇಂದಿಗೂ ಮೂಲಸೌಲಭ್ಯ ಕೊರತೆ ಎದುರಿಸುತ್ತಿದ್ದು, ನಗರಸಭೆ ಈ ವಾರ್ಡ್‌ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
ಆಗಬೇಕಿರುವ ಕೆಲಸಗಳು!
* ವಾರ್ಡ್‌ನಲ್ಲಿ ಹಾದುಹೋಗಿರುವ ದೊಡ್ಡ ರಾಜಕಾಲುವೆ (ಕೂಡ್ಲೂರು ರಸ್ತೆ ಬಳಿ) ಸಂಪೂರ್ಣ ಮುಚ್ಚಿಹೋಗಿದ್ದು, ಈ ಕಾಲುವೆ ಅಭಿವೃದ್ಧಿಪಡಿಸುವ ಜತೆಗೆ ತಡೆಗೋಡೆ ನಿರ್ಮಾಣ.
* ವಾರ್ಡ್‌ನಲ್ಲಿರುವ ಪುರಾಣ ಪ್ರಸಿದ್ಧ ದೇವಾಲಯಗಳ ಜೀರ್ಣೋದ್ಧಾರ
* ವಾರ್ಡ್ ವ್ಯಾಪ್ತಿಯ ಕಾಲನಿಗಳಲ್ಲಿ ಚರಂಡಿಗಳು ಹಾಳಾಗಿದ್ದು, ಸುಸಜ್ಜಿತ ಚರಂಡಿ ನಿರ್ಮಾಣ
* ವಾರ್ಡ್ ವಿಸ್ತರಣೆಯಾಗಿದ್ದು, ಚಿಕ್ಕಮಳೂರಿನಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಸಣ್ಣದಾಗಿದ್ದು, ಹೆಚ್ಚಿನ ನೀರು ಸಂಗ್ರಹಿಸುವ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ.
* ವಾರ್ಡ್‌ನಲ್ಲಿರುವ ಸರ್ಕಾರಿ ಶಾಲೆ ಉತ್ತಮವಾಗಿದ್ದು, ಶಾಲೆ ಮೈದಾನ ಅಭಿವೃದ್ಧಿ.
* ವಾರ್ಡ್‌ನಲ್ಲಿರುವ ತಮಿಳು ಕಾಲನಿ ಅಭಿವೃದ್ಧಿ.
* ವೇಣುಗೋಪಾಲ ದೇವಸ್ಥಾನ ಪಕ್ಕದಲ್ಲಿರುವ ಕಿರು ಉದ್ಯಾನವನ ಅಭಿವೃದ್ಧಿ.
* ಚಿಕ್ಕಮಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ನಲ್ಲಿ ನೀರು ನಿಲುಗಡೆಯಾಗುತ್ತಿದ್ದು, ಇದನ್ನು ಸರಿಪಡಿಸಬೇಕಿದೆ.
* ವಾರ್ಡ್ ವ್ಯಾಪ್ತಿಯಲ್ಲಿರುವ ಕೆಎಸ್‌ಐಸಿ ವಸತಿ ಬಡಾವಣೆ ಹಾಗೂ ಮಂಗಳವಾರಪೇಟೆಯ ಕೆಲವೆಡೆ ರಸ್ತೆ ಹಾಗೂ ಚರಂಡಿ ಕಾಮಗಾರಿ.
ಐತಿಹಾಸಿಕ ಹಿನ್ನೆಲೆಯುಳ್ಳ ವೇಣುಗೋಪಾಲಸ್ವಾಮಿ, ಜಲಕಂಠೇಶ್ವರ, ಅರ್ಕೇಶ್ವರ ದೇವಾಲಯ, ಆಹಾರಪ್ರಿಯರ ಮನಸೂರೆಗೊಂಡಿರುವ ದೋಸೆ ಹೋಟೆಲ್, ಮಳೂರು ಪುಟ್ಟಸ್ವಾಮಿಗೌಡರ ಛತ್ರ.
ಚಿಕ್ಕಮಳೂರು, ಎಚ್.ಪಿ.ಪೆಟ್ರೋಲ್ ಬಂಕ್ ಹಿಂಭಾಗ, ಕೆಎಸ್‌ಐಸಿ ಕ್ವಾರ್ಟರ್ಸ್, ಮಂಗಳವಾರಪೇಟೆ ಬಸವನಗುಡಿ ದೇವಸ್ಥಾನ ಹಿಂಭಾಗ.
ಜನಸಂಖ್ಯೆ - 2980
ವಾರ್ಡ್ ನಂ.1 ಸದಸ್ಯೆ - ಲಕ್ಷ್ಮಿ ಲೋಕೇಶ್, ಮೊಬೈಲ್ ಸಂಖ್ಯೆ 9743238054
ಲಕ್ಷ್ಮಿ ಲೋಕೇಶ್, ನಗರಸಭೆ ಸದಸ್ಯೆ
ಲಿಂಗೇಗೌಡ, ನಗರಸಭೆ ಮಾಜಿ ನಾಮಿನಿ ಸದಸ್ಯ