ವ್ಯಕ್ತಿತ್ವ ರೂಪಿಸುವ ದೇಹದಾರ್ಢ್ಯ ಸ್ಪರ್ಧೆ Bodybuilding Competition

ವ್ಯಕ್ತಿತ್ವ ರೂಪಿಸುವ ದೇಹದಾರ್ಢ್ಯ ಸ್ಪರ್ಧೆ 
Bodybuilding Competition
Published on: 

ಬೀರೂರು: ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವುದು, ದೈಹಿಕ ಆರೋಗ್ಯದ ಮಹತ್ವ ತಿಳಿಸುವುದು ಹಾಗೂ ಯುವಜನರನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸುವ ಉದ್ದೇಶದಿಂದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ ಎಂದು ಬೀರೂರು ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಡಾ. ಎಸ್.ಹರೀಶ್‌ಕುಮಾರ್ ತಿಳಿಸಿದರು.

ಅಂತರಕಾಲೇಜು ಪುರುಷರ ದೇಹದಾರ್ಢ್ಯ ಸ್ಪರ್ಧೆಯ ಕುವೆಂಪು ವಿಶ್ವವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಯುವಕರು ಆಕರ್ಷಕ ಮೈಕಟ್ಟು, ದೈಹಿಕ ಸಾಮರ್ಥ್ಯದ ಮೂಲಕ ಗಮನ ಸೆಳೆಯಬೇಕು. ಶಿಕ್ಷಣದ ಜತೆಗೆ ಕ್ರೀಡೆಗೂ ಪ್ರಾಮುಖ್ಯ ನೀಡುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಕಾಲೇಜು ಹಂತದಲ್ಲಿ ನಡೆಯುವ ಇಂಥ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಮುಂದಿನ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತವೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಈ ಸ್ಪರ್ಧೆಯನ್ನು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಅಂತಾರಾಷ್ಟ್ರೀಯ ಮಟ್ಟದವರೆಗೂ ತಲುಪಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ನಿರ್ದೇಶಕ ಎನ್.ಡಿ.ವಿರೂಪಾಕ್ಷ ಮಾತನಾಡಿ, ದೇಹದಾರ್ಢ್ಯ ಪ್ರದರ್ಶನವು ನಿರಂತರ ಪರಿಶ್ರಮ, ಶಿಸ್ತು, ತಾಳ್ಮೆ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಒಂದೆರಡು ದಿನಗಳ ತರಬೇತಿಯಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹಲವು ದಿನಗಳ ಪರಿಶ್ರಮದಿಂದ ಮಾತ್ರ ಸಾಧ್ಯ. ಡಿಸೆಂಬರ್‌ನಲ್ಲಿ ನಡೆಯುವ ಸ್ಪರ್ಧೆಗೆ ತಂಡಗಳನ್ನು ರಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಡಾ. ಜಿ.ಸಿ.ಪ್ರಸಾದ್‌ಕುಮಾರ್ ಮಾತನಾಡಿ, ಶಿಕ್ಷಣದ ಜತೆಗೆ ಸ್ಮರ್ಧಾತ್ಮಕ ಬದುಕಿನಲ್ಲೂ ತೊಡಗಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಈ ದೇಹದಾರ್ಢ್ಯ ಸ್ಪರ್ಧೆ ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸಿನ ಮೆಟ್ಟಿಲಾಗಲಿ. ಯಾವುದೇ ಅಂಜಿಕೆ ಇಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘದ ಕಾರ್ಯದರ್ಶಿ ಯೋಗೇಶ್, ದೇಹದಾರ್ಢ್ಯ ಪಟು ಬಿ.ಆರ್.ಗೌತಮ್, ಬೋಧಕ ವರ್ಗ, ತೀರ್ಪುಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net