

ಎನ್.ಆರ್.ಪುರ: ಮಕ್ಕಳ ಬಾಲ್ಯ ಸುರಕ್ಷಿತವಾಗಿದ್ದಲ್ಲಿ, ಶಿಕ್ಷಿತರಾಗಿದ್ದಲ್ಲಿ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಅ.26ರಿಂದ 30ರವರೆಗೆ ಸುರಕ್ಷಿತ ಬಚಪನ್ ಅಭಿಯಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಸುರಕ್ಷಿತ ಬಾಲ್ಯ, ಮಕ್ಕಳ ರಕ್ಷಣೆ ಕಾನೂನು, ಜವಾಬ್ದಾರಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ್ ಗೌಡ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿಯಿಂದ ಮೌಲಾನ ಆಜಾದ್ ಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ ಸುರಕ್ಷಿತ ಬಚಪನ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಪಾಲಕರು ಮತ್ತು ಗುರುಗಳ ಮಾರ್ಗದರ್ಶನದಂತೆ ವಿದ್ಯಾಭ್ಯಾಸದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಓದಬೇಕು. ಮೊಬೈಲ್ ಅತಿ ಕಡಿಮೆ ಬಳಸಬೇಕು. 18 ವಷರ್ದವರೆಗೆ ವಾಹನ ಚಾಲನೆ ಮಾಡಬಾರದು. ಬಾಲ್ಯವಿವಾಹ, ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಬಳಸಬಾರದು ಎಂದರು.
ವಕೀಲ ವೆಂಕಟೇಶ್‌ಮೂರ್ತಿ ಮಾತನಾಡಿ, ಮಕ್ಕಳು ಪೋಕ್ಸೋ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. ಯಾವುದಾದರೂ ದೌರ್ಜನ್ಯಗಳು ನಡೆದಲ್ಲಿ ಮುಕ್ತವಾಗಿ ಪಾಲಕರು ಮತ್ತು ಗುರುಗಳಿಗೆ ತಿಳಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಎಲ್ಲ ಮಕ್ಕಳೂ ಜವಾಬ್ದಾರಿಯಿಂದ ವರ್ತಿಸಿ ಶಾಲೆಗೆ, ಪಾಲಕರಿಗೆ ಗೌರವ ತಂದುಕೊಡಬೇಕು ಎಂದು ತಿಳಿಸಿದರು.
ಶಾಲೆ ಮುಖ್ಯಶಿಕ್ಷಕಿ ನಿವೇದಿತಾ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಶಿಕ್ಷಕಿ ಪ್ರಫುಲ್ಲ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.