ಮೂಡಿಗೆರೆ ತಾಲೂಕಿನ ಕೋಗಿಲು ಗ್ರಾಮದಲ್ಲಿ ಕಾಡು ಹಂದಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮೀ ಅವರು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾಸ್ಪತ್ರೆಗೆ ಎಸಿಎಫ್ ಆಕರ್ಷ್,ಆರ್‌ಎಫ್‌ಒ ಮಂಜುನಾಥ್, ಎಆರ್‌ಎಫ್‌ಒ ರಂಜಿತ್, ಅಶ್ವಥ್ ಭೇಟಿ ನೀಡಿದರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಊರಿನತ್ತ ಬರುತ್ತಿರುವ ಕಾಡು ಪ್ರಾಣಿಗಳು
ವಾರಕ್ಕೆರಡು ಮಂದಿ ಮೇಲಾದರೂ ದಾಳಿ
ಕಾಫಿ ತೋಟಗಳೇ ಆವಾಸ ಸ್ಥಾನ
ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ದಿನೇ ದಿನೇ ಕಾಡುಪ್ರಾಣಿಗಳ ಉಪಟಳ ಹೆಚ್ಚುತ್ತಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ತೋಟಕ್ಕೆ ಹೋಗಲೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ಮಲೆನಾಡಿನ ಜನತೆ ಇದೀಗ ಕಾಡುಕೋಣ ಹಾಗೂ ಕಾಡುಹಂದಿಗಳ ಉಪಟಳದಿಂದ ಸಂಕಷ್ಟ ಅನುಭವಿಸುವಂತಾಗಿದೆ.
ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಆಗಮಿಸುವ ಕಾಡಾನೆಗಳು ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕಿಗೆ ದಾಂಗುಡಿ ಇಡುತ್ತಿವೆ. ಹಿಂದೆ ಕಾಫಿನಾಡಿಗೆ ಬರುತ್ತಿದ್ದ ಕಾಡಾನೆಗಳು ಒಂದೆರಡು ತಿಂಗಳ ಹಿಂದೆ ಬಂದು ಬಂದ ದಾರಿಯಲ್ಲೇ ವಾಪಸ್ ಆಗುತ್ತಿದ್ದವು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಾಫಿನಾಡಿಗೆ ಬಂದ ಆನೆಗಳಲ್ಲಿ ಒಂದಷ್ಟು ವಾಪಸ್ ಹೋದರೂ ಇನ್ನೊಂದಷ್ಟು ಇಲ್ಲಿಯೇ ಠಿಕಾಣಿ ಹೂಡಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಕಾಡಾನೆ ಹಾವಳಿಯಿಂದ ಹೈರಾಣಾಗಿದ್ದ ಮಲೆನಾಡಿನ ಜನರಿಗೆ ಕಾಡುಕೋಣ ಹಾಗೂ ಕಾಡುಹಂದಿಗಳ ಹಾವಳಿಯೂ ಹೆಚ್ಚಿರುವುದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಕಾಫಿ ತೋಟಗಳಲ್ಲೇ ಸಂಚಾರ ನಡೆಸುತ್ತಿರುವ ಕಾಡುಕೋಣ ಹಾಗೂ ಕಾಡುಹಂದಿಗಳು ತೋಟಗಳಲ್ಲಿ ಕೆಲಸ ಮಾಡುವವರ ಮೇಲೆ ದಾಳಿ ನಡೆಸುತ್ತಿವೆ. ಒಂದೇ ತಿಂಗಳ ಅವಧಿಯಲ್ಲಿ ಕಾಡುಕೋಣ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದರೆ, ಕಾಡುಹಂದಿ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತೋಟಗಳೇ ಆವಾಸ ಸ್ಥಾನ
ಕಾಡಿನಿಂದ ಹೊರಬರುವ ಕಾಡುಕೋಣ ಹಾಗೂ ಕಾಡುಹಂದಿಗಳಿಗೆ ಕಾಡಂಚಿನಲ್ಲೇ ಇರುವ ಕಾಫಿತೋಟಗಳು ಆವಾಸ ಸ್ಥಾನವಾಗಿವೆ. ಕಾಫಿ ತೋಟಗಳಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿರುವ ಈ ಪ್ರಾಣಿಗಳನ್ನು ಓಡಿಸಲು ಮುಂದಾಗುವ ಬೆಳೆಗಾರರ ಮೇಲೆಯೇ ದಾಳಿ ನಡೆಸುತ್ತಿವೆ. ಕಾಫಿ ತೋಟಗಳಿಂದ ಈ ಪ್ರಾಣಿಗಳನ್ನು ಕಾಡಿಗೆ ಓಡಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಾಫಿ ತೋಟಗಳಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರ ಹಾಗೂ ನೀರು ಸಿಗುತ್ತಿರುವುದರಿಂದ ಕಾಫಿತೋಟವನ್ನು ಬಿಟ್ಟು ಈ ಪ್ರಾಣಿಗಳು ಕದಲುತ್ತಿಲ್ಲ.
ಪ್ರಾಣಿಗಳ ಸಂಖ್ಯೆಯೂ ಹೆಚ್ಚಳ
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಡು ಪ್ರಾಣಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿಯೇ ವನ್ಯ ಜೀವಿಗಳು ಕಾಡಂಚಿನ ಗ್ರಾಮಗಳಿಗೆ ದಾಂಗುಡಿ ಇಡುತ್ತಿವೆ ಎನ್ನಲಾಗುತ್ತಿದೆ. ಹುಲಿಗಣತಿ ಹಾಗೂ ಆನೆ ಗಣತಿ ನಡೆಯುತ್ತದೆ. ಆದರೆ ಬೇರೆ ಯಾವುದೇ ಪ್ರಾಣಿಗಳ ಗಣತಿ ನಡೆಯುವುದಿಲ್ಲ. ಹೀಗಾಗಿ ಯಾವ ಪ್ರಾಣಿಗಳು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿವೆ ಎನ್ನುವ ಮಾಹಿತಿ ಅರಣ್ಯ ಇಲಾಖೆಗೂ ಇಲ್ಲವಾಗಿದೆ. ಹೀಗಾಗಿಯೇ ಅರಣ್ಯ ಇಲಾಖೆ ಸಿಬ್ಬಂದಿ ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗುತ್ತಿಲ್ಲ.
ಕಾಡುಕೋಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ
ಮಲೆನಾಡು ಭಾಗದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿರುವುದೇ ಕಾಡುಕೋಣಗಳ ಸಂಖ್ಯೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ಹುಲಿಗಳ ಸಂಖ್ಯೆ ಹೆಚ್ಚಿರುವಾಗ ಅವು ಕಾಡುಕೋಣ, ಕಾಡೆಮ್ಮೆಗಳನ್ನು ಬೇಟೆಯಾಡುತ್ತಿದ್ದವು. ಆಗ ಕಾಡುಕೋಣಗಳ ಸಂಖ್ಯೆ ನಿಯಂತ್ರಣದಲ್ಲಿತ್ತು. ಆದರೆ ಹುಲಿಗಳು ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಹೊರತುಪಡಿಸಿ ಮಲೆನಾಡಿನ ಕಾಡುಗಳಿಂದ ಮಾಯವಾದ ಬೆನ್ನಲ್ಲೇ ಕಾಡುಕೋಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಕೆಲ ವರ್ಷದ ಹಿಂದೆ ಕಾಡುಕೋಣಗಳಿಗೆ ಕಾಲುಬಾಯಿ ಜ್ವರ ಬಂದು ದೊಡ್ಡ ಪ್ರಮಾಣದಲ್ಲಿ ಕಾಡುಕೋಣಗಳು ಸಾವನ್ನಪ್ಪಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳದಿರುವ ಪರಿಣಾಮ ಕಾಡುಕೋಣಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ಸಂತಾನೋತ್ಪತ್ತಿಯೂ ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದು ವಿಶೇಷವಾಗಿದೆ.
ಅರಣ್ಯ ಇಲಾಖೆಯಿಂದ ಪರಿಹಾರ
ಕಾಡಾನೆ ಹಾಗೂ ಕಾಡುಕೋಣಗಳ ದಾಳಿಯಿಂದ ಮೃತರಾದವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದಲ್ಲದೆ ಪ್ರಾಣಿಗಳ ದಾಳಿಯಿಂದ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಬೇಕಿದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ನೋಡಿಕೊಂಡು ಗರಿಷ್ಟ 60 ಸಾವಿರ ರೂ.ವರೆಗೆ ಪರಿಹಾರ ನೀಡಲು ಅರಣ್ಯ ಇಲಾಖೆಗೆ ಅವಕಾಶವಿದೆ.