ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕು ಜೇನುಗದ್ದೆ ಸಮೀಪದ ಪುರ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ್ದು ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸೊರಬ ತಾಲೂಕು ಆನವಟ್ಟಿಯ ಗಣಪತಿ(40) ಕಾಡಾನೆ ದಾಳಿಗೆ ಒಳಗಾದ ಕಾರ್ಮಿಕ. ಈತ ಪುರ ಗ್ರಾಮದ ಕಾಫಿ ತೋಟದಲ್ಲಿ ಭಾನುವಾರ ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಏಕಾಏಕಿಯಾಗಿ ದಾಳಿ ಮಾಡಿದ್ದು ಕಾರ್ಮಿಕನ ಬೆನ್ನು, ಕಾಲು ಹಾಗೂ ಕೈಗೆ ಗಂಭೀರವಾಗಿ ಗಾಯವಾಗಿದೆ.
ಗಾಯಗೊಂಡ ಕಾರ್ಮಿಕನನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿದೆ. ಕಳೆದ ಜುಲೈನಲ್ಲಿ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು. ಈಗ ಮತ್ತೋರ್ವ ಕಾರ್ಮಿಕನ ಮೇಲೆ ಆನೆ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಉಂಟುಮಾಡಿದೆ.