ಕಾಡಾನೆ ದಾಳಿಗೆ ಅಡಕೆ, ಭತ್ತದ ಬೆಳೆ ನಾಶ

ಕಾಡಾನೆ ದಾಳಿಯಿಂದ ಬೆಳೆ ಕಳೆದುಕೊಂಡ ಸೀತು ಹಾಗೂ ಅವರ ಕುಟುಂಬ.
ಕಾಡಾನೆ ದಾಳಿಯಿಂದ ಬೆಳೆ ಕಳೆದುಕೊಂಡ ಸೀತು ಹಾಗೂ ಅವರ ಕುಟುಂಬ.
Published on
ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾಪಂ ವ್ಯಾಪ್ತಿಯ ಶೀರ್ಲು ಗ್ರಾಮದ ಅಡಲಕ್ಕಿ ಎಂಬಲ್ಲಿ ಸೀತು ಎಂಬ ಮಹಿಳೆಯ ಗದ್ದೆ ಹಾಗೂ ತೋಟಕ್ಕೆ ಕಾಡಾನೆ ನುಗ್ಗಿ ಅಡಕೆ ಮರ, ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. 
ಜಮೀನಿನ ಪಕ್ಕದಲ್ಲಿರುವ ದಟ್ಟ ಕಾಡಿನಿಂದ ಸಂಜೆಯಾಗುತ್ತಲೇ ಜಮೀನಿಗೆ ಬರುತ್ತದೆ. ಜಮೀನಿನ ಸಮೀಪ ಇರುವ ಮನೆಯಲ್ಲಿ ಮೂವರು ಮಹಿಳೆಯರು ಮಾತ್ರ ವಾಸವಾಗಿದ್ದು ತಾವೇ ಬಿತ್ತಿದ್ದ ಬೆಳೆ ನಾಶವಾಗುವುದನ್ನು ಕಂಡು ಜೀವನ ನಿರ್ವಹಣೆಗೆ ಮಂದೇನು? ಎಂಬ ಚಿಂತೆ ಅವರನ್ನು ಕಾಡುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ 7 ಗಂಟೆಗೆ ಬಂದು 11ರವರೆಗೆ ಇದ್ದು ಪಟಾಕಿ ಸಿಡಿಸಿ ಹೋಗುತ್ತಿದ್ದಾರೆ. ಆನೆಯ ನಿಖರ ಮಾಹಿತಿ ಲಭ್ಯವಾಗದ ಕಾರಣ ಇಟಿಎ್ ಸಿಬ್ಬಂದಿ ಕರೆಯಿಸಿ ಆನೆಯನ್ನು ಬೇರೆಡೆ ಓಡಿಸುವ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅರಣ್ಯ ಇಲಾಖೆಯ ಹೇಳಿಕೆ. ಡ್ರೋನ್ ಮುಖಾಂತರ ಆನೆ ಪತ್ತೆಹಚ್ಚಲು ಪ್ರಯತ್ನಿಸಿದರೂ ದಟ್ಟ ಅರಣ್ಯವಾದ್ದರಿಂದ ಆನೆಯ ಚಲನವಲನಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ.
ಆನೆ ಇರುವ ಸ್ಥಳ ಪತ್ತೆಹಚ್ಚಲು ಆಧುನಿಕ ಡ್ರೋನ್ ಬೇಕು. ಇಟಿಎ್ ಸಿಬ್ಬಂದಿ ಇರುವುದು ಎನ್.ಆರ್.ಪುರದಲ್ಲಿ. ಡ್ರೋನ್ ತರಿಸಿ ಕಾರ್ಯಾಚರಣೆ ನಡೆಸಿ ಆನೆ ಇರುವ ಸ್ಥಳ ಖಚಿತಗೊಂಡ ಮೇಲೆ ಇಟಿಎ್ ಸಿಬ್ಬಂದಿಗೆ ತಿಳಿಸಬೇಕು. ಹಾಗಾಗಿ ಆನೆಯನ್ನು ಪತ್ತೆ ಹಚ್ಚುವುದು ಸುಲಭದ ಕಾರ್ಯವಲ್ಲ. ಸಂಪೂರ್ಣ ಬೆಳೆ ನಾಶವಾಗಿರುವ ಸೀತು ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪುನರ್ವಸತಿ ಯೋಜನೆಯಡಿ ಪರಿಹಾರ ನೀಡಬೇಕು ಎಂದು ತಾಪಂ ಮಾಜಿ ಸದಸ್ಯ ನೂತನ್‌ಕುಮಾರ್, ಕೃಷಿಕ ರಾಜೇಶ್ ದ್ಯಾವಂಟು, ಗ್ರಾಮಸ್ಥರಾದ ಸಚೀಂದ್ರ, ಸುದೇಶ್, ಚಂದ್ರಶೇಖರ ಶೆಟ್ಟಿ, ಕಳಸಪ್ಪ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net