ಶೃಂಗೇರಿ: ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಮೂಲ್ಯ ಹಕ್ಕಾಗಿದ್ದು ದೇಶದ ಪ್ರತಿ ಪ್ರಜೆಯೂ ಮತದಾನದಲ್ಲಿ ಭಾಗವಹಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ್ ಹೇಳಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಜಾಥಾ ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಯಾವುದೇ ರೀತಿಯ ಭಯ, ಅಂಜಿಕೆ ಬೇಡ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು ಗುರುತಿಸಿ ಅವರನ್ನು ಉಳಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಗಣತಿ ನಮೂನೆಯನ್ನು ಮತದಾರರಿಗೆ ನೀಡಲಾಗುತ್ತಿದ್ದು ನಮೂನೆಯನ್ನು ಭರ್ತಿ ಮಾಡಿ ಸಂಬಂಧಿಸಿದ ಬಿಎಲ್‌ಒಗಳಿಗೆ ನೀಡಬೇಕು ಎಂದರು.
ಪ್ರಾಧ್ಯಾಪಕಿ ಶೋಭಾ ಮಾತನಾಡಿ, ಸಂವಿಧಾನ ನೀಡಿದ ಹಕ್ಕನ್ನು ಉಳಿಸಿಕೊಳ್ಳಲು ಮತದಾರರ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಬಿಎಲ್‌ಒ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ. ಸರ್ಕಾರ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಜಾಥಾ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯಿತು. ಪ್ರಾಧ್ಯಾಪಕರಾದ ಪೂರ್ಣಿಮಾ, ವಾಸುದೇವ್, ಮಹೇಶ್ ಕಾಕತ್ಕರ್, ರೇಷ್ಮಾ, ಅಮಿತಾ, ಅಮೃತಾ, ಪ್ರಕಾಶ್ ಇತರರಿದ್ದರು.