ಬೀರೂರಿನ ಹಳೇಪೇಟೆಯಲ್ಲಿನ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ಅಮ್ಮನವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Published on:
Copied
Follow Us
ಬೀರೂರು: ಇಲ್ಲಿನ ಹಳೇಪೇಟೆಯಲ್ಲಿನ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಮಹಾ ರಥೋತ್ಸವ ಮಂಗಳವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಪ್ರತಿದಿನ ಊರಿನ ರಾಜಬೀದಿಗಳಲ್ಲಿ ಆನೆ, ಸಿಂಹ, ಸರ್ಪ, ಕುದುರೆ, ಬಸವ, ನವಿಲು, ಮಂಟಪ ಉತ್ಸವ ಸೇರಿದಂತೆ ಎಂಟು ದಿನಗಳ ಕಾಲ ಶ್ರೀ ವೀರಭದ್ರ ಸ್ವಾಮಿಯನ್ನು ಪುಷ್ಪಗಳಿಂದ ಅಲಂಕರಿಸಿ ವಿವಿಧ ವಾದ್ಯಗೋಷ್ಠಿಗಳ ಸಹಿತ ಉತ್ಸವ ಹಾಗೂ ದೇವಸ್ಥಾನ ಆವರಣದಲ್ಲಿ ದಾಸೋಹ ನೆರವೇರಿಸಲಾಯಿತು.
ಸೋಮವಾರ ಸಂಜೆ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ಅಮ್ಮನವರ ಕಲ್ಯಾಣೋತ್ಸವ ನಡೆಯಿತು. ಹಣತೆ ಹಾಗೂ ಹರಕೆ ಹೊತ್ತ ಸುಮಂಗಲೆಯರು ಮತ್ತು ಯುವತಿಯರು ಬೆಳಗ್ಗೆಯಿಂದ ರಾತ್ರಿಯವರೆಗೆ ಉಪವಾಸವಿದ್ದು ರಥೋತ್ಸವದ ಸುತ್ತಲು ಹಣತೆಯೊಂದಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ತಮ್ಮ ಮನೋಭಿಲಾಷೆಯ ವಿಶೇಷ ದುಗ್ಗುಲ ಸೇವೆ ಸಲ್ಲಿಸಿದರು.
ಮಂಗಳವಾರ ಬೃಹದಾಕಾರದ ಹೂವಿನ ಅಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರುದ್ರಹೋಮ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ನೂರಾರು ತೆಂಗಿನ ಕಾಯಿಗಳನ್ನು ರಥದ ಚಕ್ರಕ್ಕೆ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದಿಂದ ಮಹಾನವಮಿ ಬಯಲಿನವರೆಗೆ ರಥವನ್ನು ಎಳೆಯುವ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ನೂರಾರು ಭಕ್ತಾದಿಗಳು ತೇರಿಗೆ ಬಾಳೆಹಣ್ಣು ಎಸೆಯುವುದರ ಜತೆಗೆ ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.
ವಾಪಸ್ ರಥ ದೇವಾಲಯದ ಸನಿಹಕ್ಕೆ ಆಗಮಿಸಿದ ಸಂದರ್ಭ ಎಳೆ ಕಂದಮ್ಮಗಳು ಸೇರಿದಂತೆ ನೂರಾರು ಮಕ್ಕಳು ರಥದ ಸುತ್ತಲೂ ದಿಂಡು ಉರುಳು ಸೇವೆಯ ಮೂಲಕ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು. ರಥೋತ್ಸವ ಅಂಗವಾಗಿ ನಂದಿಧ್ವಜ ಕುಣಿತ, ಈಶ್ವರನ ವೇಷಧಾರಿ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಭಕ್ತರ ಗಮನ ಸೆಳೆಯಿತು.
ಯುವಕರು ಡ್ರಮ್ಸ್‌ಗಳ ಶಬ್ದಕ್ಕೆ ವೀರಭದ್ರ, ವೀರಭದ್ರ ಎನ್ನುವ ಘೋಷದೊಂದಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ಶ್ರೀ ವೀರಭದ್ರ ಸ್ವಾಮಿ ಯುವಕ ಸಂಘ ಸೇರಿದಂತೆ ಭಕ್ತಾದಿಗಳು ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಅನ್ನ ದಾಸೋಹ ನೆರವೇರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಬುಧವಾರ ಓಕುಳಿ, ಅವಭೃತೋತ್ಸವ ಕಾರ್ಯಕ್ರಮ ನಡೆಯುವುದರೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದೆ. ಪ್ರತಿವರ್ಷ ಸಂಜೆ 5ಕ್ಕೆ ಆರಂಭವಾಗುತ್ತಿದ್ದ ರಥೋತ್ಸವ ಈ ಬಾರಿ ಚಂದ್ರಗ್ರಹಣ ಮಧ್ಯಾಹ್ನ 3.30ಕ್ಕೆ ಆರಂಭವಾಗುವ ನಿಮಿತ್ತ ಬೆಳಗ್ಗೆ 10.30ಕ್ಕೆ ರಥೋತ್ಸವವನ್ನು ಆರಂಭಿಸಿ ಮಧ್ಯಾಹ್ನ 12ಕ್ಕೆ ಮುಗಿಸಿ ಉತ್ಸವ ಮೂರ್ತಿಗಳನ್ನು ಗುಡಿ ತುಂಬಿಸಿ ಬಾಗಿಲು ಮುಚ್ಚಲಾಯಿತು. ರಥೋತ್ಸವದಲ್ಲಿ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಪುರಸಭೆ ಮಾಜಿ ಅಧ್ಯಕ್ಷರು, ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ಸ್ವಾಮಿಕೃಪೆಗೆ ಪಾತ್ರರಾದರು.