ಬೀರೂರು: ಜಾತಿ, ಮತದಿಂದ ಯಾರೂ ಮೇಲಲ್ಲ ಮತ್ತು ಕೀಳಲ್ಲ ಎಂಬ ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಶರಣ ಸಂಸ್ಕೃತಿ ಮತ್ತು ವಚನಗಳ ಉಳಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಪ್ರಮುಖವಾಗಿದೆ ಎಂದು ಮಡಿವಾಳ ಸಮಾಜದ ಅಧ್ಯಕ್ಷ ರಾಜಶೇಖರ್ ತಿಳಿಸಿದರು.
ಪಟ್ಟಣದ ಸಂತೆ ಆವರಣದಲ್ಲಿರುವ ಮಡಿವಾಳ ಮಾಚಿದೇವ ದೇವಾಲಯದಲ್ಲಿ ಭಾನುವಾರ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜ್ಜಳನ ಕಲ್ಯಾಣದಲ್ಲಿ ಶರಣತನಕ್ಕೆ ಅರಸನಿಂದಲೇ ಅಡ್ಡಿಯಾದರೂ ಅಂಜದೆ ಕಡೆಗೆ ರಾಜನೇ ಅಹಂ ಬಿಟ್ಟು ತನ್ನನ್ನು ಅಪ್ಪಿಕೊಳ್ಳುವಂತೆ ನಡೆದವರು ಮಾಚಿದೇವರು. ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಸಂದರ್ಭದಲ್ಲಿ ವಚನಗಳ ಸಂಗ್ರಹವನ್ನು ಉಳಿಸಲು ಏಕಾಂಗಿಯಾಗಿ ಕತ್ತಿ ಹಿಡಿದು ಶೌರ್ಯವನ್ನು ಮೆರೆದವರು ಎಂದರು.
ಇತ್ತೀಚಿನ ದಿನಗಳಲ್ಲಿ ಮಡಿ ಮಾಡುವ ಕಸುಬಿನಿಂದ ದೂರಾಗುತ್ತಿರುವ ಮಡಿವಾಳರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ನಮ್ಮ ಜನಾಂಗವನ್ನು ಪ್ರವರ್ಗ 2ಎನಲ್ಲಿ ಸೇರಿಸಿದ್ದಾರೆ. ಇದರಲ್ಲಿ ನೂರಾರು ಜಾತಿಗಳಿದ್ದು ಲಕ್ಷಾಂತರ ಜನರಿದ್ದಾರೆ. ಇಷ್ಟೊಂದು ಜನಸಂಖ್ಯೆ ಇರುವ ಸಮುದಾಯಗಳೊಡನೆ ಹೋರಾಡಿ, ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗಾಗಿ ಮಕ್ಕಳು ಶೈಕ್ಷಣಿಕವಾಗಿ ಸಬಲರಾಗಬೇಕು. ಮೀಸಲಾತಿಗಿಂತ ಜ್ಞಾನಕ್ಕೆ ಹೆಚ್ಚು ಆದ್ಯತೆ ಇದ್ದು ವಿದ್ಯೆ ಮತ್ತು ಬುದ್ಧಿಯ ಬಲದಿಂದಲೇ ಎಲ್ಲರೂ ಪ್ರಗತಿಯ ಕಡೆ ಸಾಗಬೇಕಾದ ಅನಿವಾರ್ಯತೆಯಿದೆ ಎಂದರು.
ಮಡಿವಾಳ ಸಮಾಜದ ನಂಜಯ್ಯ, ಪ್ರಕಾಶ್, ತಿಪ್ಪೇಶಪ್ಪ, ಅರ್ಚಕ ಪಾಲಾಕ್ಷಯ್ಯ, ವೀಣಾ, ನಟರಾಜ್, ಶ್ರೀನಿವಾಸ ಮತ್ತು ಸಮಾಜದ ಬಂಧುಗಳು ಇದ್ದರು.