ರೇವಣಸಿದ್ದೇಶ್ವರ ಮಠದ ನೂತನ ಕಟ್ಟಡ ಕಾರ್ಯ ಶೇ.60 ರಷ್ಟು ಪೂರ್ಣ
ಕಡೂರಿನ ಪ್ರವಾಸಿ ಮಂದಿರದಲ್ಲಿ ಆಸಂದಿ ಮಹಾಸಂಸ್ಥಾನ ಮಠದ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು.
Published on:
Copied
Follow Us
ಕಡೂರು: ತಾಲೂಕಿನ ಆಸಂದಿ ಗ್ರಾಮದಲ್ಲಿರುವ ಶ್ರೀಗುರು ರೇವಣಸಿದ್ದೇಶ್ವರ ಶ್ರೀ ಮಠದ ನೂತನ ಕಟ್ಟಡ ಲೋಕಾರ್ಪಣೆಗೆ ಪೂರ್ವ ಸಿದ್ಧ್ದತೆಗಳು ಪ್ರಗತಿಯಲ್ಲಿವೆ ಎಂದು ಮಠದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಜಿ.ರೇವಣ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಸಂದಿ ಮಹಾಸಂಸ್ಥಾನದ ಶ್ರೀ ಗುರು ರೇವಣಸಿದ್ದೇಶ್ವರ ಶ್ರೀ ಮಠವು ಈಗಾಗಲೇ ಶೇ.60ರಷ್ಟು ನಿರ್ಮಾಣದ ಕಾರ್ಯ ಪ್ರಗತಿ ಹೊಂದಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ವಕ್ಕಲುಗಳ ಭಕ್ತರ ಸಹಕಾರದ ನೆರವಿಗಾಗಿ ಕಳೆದ ವಾರ ಚಿಕ್ಕಮಗಳೂರು, ಕಡೂರು, ಬೀರೂರು ವ್ಯಾಪ್ತಿಯ ಭಾಗಗಳಲ್ಲಿ ಆರಂಭಿಸಿದ್ದ ಮೊದಲ ಹಂತದ ಲೋಕಾರ್ಪಣಾ ಸಂಕಲ್ಪ ಜ್ಯೋತಿ ರಥಯಾತ್ರೆ ಅಭೂತಪೂರ್ವಕವಾಗಿ ಯಶಸ್ವಿಗೊಳಿಸಲಾಗಿದೆ. ವಕ್ಕಲುಗಳ ಭಕ್ತರ ಗ್ರಾಮಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಭವ್ಯ ಸ್ವಾಗತದ ಮೂಲಕ ಮಠದ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡುವ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯದ ಮೈಸೂರು, ಕೊಡುಗು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು, 8 ಜಿಲ್ಲೆಗಳಲ್ಲಿ ಸುಮಾರು 8 ಸಾವಿರ ವಕ್ಕಲುಗಳ ಭಕ್ತರಿದ್ದು, ಈ ಲೋಕಕಲ್ಯಾಣ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಇನ್ನು ಎರಡನೇ ಹಂತದ ಸಂಕಲ್ಪ ರಥ ಯಾತ್ರೆಯು ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಶ್ರೀಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಧನಸಹಾಯ ಮಾಡಿದ ಭಕ್ತರಿಗೆ ಗುರು ರೇವಣಸಿದ್ದರ ಸಂಪೂರ್ಣ ಆರ್ಶಿವಾದ ದೊರೆಯಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಅತಿ ಹೆಚ್ಚು ವಕ್ಕಲುಗಳ ಭಕ್ತರನ್ನು ಹೊಂದಿರುವ ಆಸಂದಿ ಮಹಾಸಂಸ್ಥಾನದ ಶ್ರೀಮಠದ ಲೋಕಾರ್ಪಣೆ ಕಾರ್ಯವನ್ನು 2027ರಲ್ಲಿ ನಡೆಸುವ ಆಶಯ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಮಠದ ನಿರ್ಮಾಣದ ಕಾರ್ಯಗಳಿಗೆ ವೇಗ ದೊರಕಿಸಿಕೊಡಲಾಗಿದ್ದು, ವಕ್ಕಲುಗಳ ಭಕ್ತರ ಸಹಕಾರ ಅಗತ್ಯ ಎಂದರು.
ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಎಚ್.ಬಿ.ಅಜ್ಜಯ್ಯ ಒಡೆಯರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಬಸವರಾಜಪ್ಪ, ಉಪಾಧ್ಯಕ್ಷ ಜಿ.ಜಯಪ್ಪ, ಕಾರ್ಯದರ್ಶಿ ಕೆ.ಎಂ.ಶಾಂತಪ್ಪ, ಯರದಕೆರೆ ರಾಜಪ್ಪ, ಪುಟ್ಟೇಗೌಡರು, ಕೆ.ಜಿ.ಲೋಕೇಶ್ವರ್, ಅನು ಪಾಟೀಲ್, ಎಚ್.ಟಿ.ದೇವರಾಜ್, ಮಂಜುನಾಥ್ ಮತ್ತಿತರಿದ್ದರು.