ಕಡೂರು ತಾಲೂಕಿನಲ್ಲಿ ಶೇ.100 ಶೈಕ್ಷಣಿಕ ಪ್ರಗತಿಯ ಗುರಿ

ಕಡೂರಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕೆ.ಎಸ್.ಆನಂದ್, ಸಿ.ಆರ್.ಪ್ರವೀಣ್, ಬಿಇಒ ಎಂ.ಎಚ್.ತಿಮ್ಮಯ್ಯ ಇದ್ದರು
ಕಡೂರಲ್ಲಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕೆ.ಎಸ್.ಆನಂದ್, ಸಿ.ಆರ್.ಪ್ರವೀಣ್, ಬಿಇಒ ಎಂ.ಎಚ್.ತಿಮ್ಮಯ್ಯ ಇದ್ದರು
Published on
ಕಡೂರು: ಸಮೃದ್ಧ ರಾಷ್ಟ್ರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ದೇಶಕ್ಕೆ ಅನೇಕ ಹೋರಾಟಗಾರ ತ್ಯಾಗ ಬಲಿದಾನ ಮತ್ತು ಮಹಾತ್ಮ ಗಾಂಧೀಜಿ ಅವರ ಅಹಿಂಸ ಮಾರ್ಗದ ತತ್ವ ಅಧಾರದಡಿ ಸ್ವಾತಂತ್ರ್ಯ ಲಭಿಸಿದೆ. ದೇಶದ ಭದ್ರಬುನಾದಿಗೆ ಅಡಿಪಾಯ ಹಾಕಿದ ಅಂದಿನ ಪ್ರಧಾನಿ ನೆಹರೂ ಸೇರಿದಂತೆ ಇಂದಿನ ಪ್ರಧಾನಿಯವರೆಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ದೇಶವು ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದು ಸಾಕ್ಷರತೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಶೇ.80 ರಷ್ಟು ಸಾಕ್ಷರತೆಯ ಪ್ರಮಾಣವಿದೆ. ಶೇ.100 ರಷ್ಟು ಪ್ರಗತಿ ಸಾಧಿಸಬೇಕಿರುವುದು ಎಲ್ಲರ ಜವಾಬ್ದಾರಿಯಾಗಲಿದೆ. ರಾಜ್ಯ ಸರಕಾರ ಯುವಕರಿಗಾಗಿ ಸಂಘಟನೆ ಬಲವರ್ಧನೆಗೊಳಿಸಲು ಭಾರತ್ ಜೋಡ್ ಮೂಲಕ ವಿಶೇಷ ಯೋಜನೆಯನ್ನು ರೂಪಿಸಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಸ್ವಾತಂತ್ರ್ಯ ಎಂದರೆ ಕೇವಲ ಪರಕೀಯ ಆಡಳಿತದಿಂದ ಮುಕ್ತಿ ಹೊಂದುವುದಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ, ಗೌರವಯುತ ಜೀವನ, ಕಾನೂನಿನ ಮುಂದೆ ಸಮಾನತೆ ಮತ್ತು ಅಭಿವೃದ್ಧಿಯ ಫಲ ದೊರೆಯುವಂತೆ ಮಾಡುವುದು ಸ್ವಾತಂತ್ರ್ಯದ ಆಶಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತವನ್ನು ನಿರ್ಮಿಸುವುದು ನಮ್ಮ ಜವಬ್ದಾರಿ. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನದೇ ಆದ ಪಾತ್ರ ನಿರ್ವಹಿಸಬೇಕು ಎಂದರು.
ಪೌರಕಾರ್ಮಿಕರು, ವಿಶೇಷ ಚೇತನದ ಮಕ್ಕಳು ಪಥಸಂಚಲನ ನಡೆಸಿದರು. ನಿವೇದಿತಾ ಶಾಲೆಯ ವಿಶೇಷ ಚೇತನ ಮಕ್ಕಳು ನೃತ್ಯರೂಪಕವಾಗಿ ನೆಡೆಸಿಕೊಟ್ಟ ಕಾರ್ಯಕ್ರಮ ಸಭಿಕರ ಮನಸೆಳೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ತಾಪಂ ಇಒ ಸಿ.ಆರ್.ಪ್ರವೀಣ್, ಬಿಇಒ ಎಂ.ಎಚ್.ತಿಮ್ಮಯ್ಯ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಡಿ.ಉಮೇಶ್, ಜಿಲ್ಲಾ ಕೆಡಿಪಿ ಸದಸ್ಯ ಅಶೋಕ್, ಪಿಡ್ಲ್ಯೂಡಿ ಎಇಇ ಬಸವರಾಜ್ ನಾಯ್ಕ, ಸಿಪಿಐ ರಫೀಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net