ಬಾಳೆಹೊನ್ನೂರು: ಶಿಕ್ಷಣಕ್ಕೆ ನೀಡಿದ ಕೊಡುಗೆಗಳು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿವೆ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಆರ್.ಪ್ರಭಾಕರ ಶೆಟ್ಟಿ ಹೇಳಿದರು.
ಪಟ್ಟಣದ ಬಂಟರ ಯಾನೆ ನಾಡವರ ಸಂಘದಿಂದ ಎಚ್.ಆರ್.ಆನಂದ್, ನಟರಾಜ್ ಶೆಟ್ಟಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶಿಕ್ಷಣವೇ ಅದಕ್ಕೆ ಅಡಿಪಾಯ. ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ವ್ಯಕ್ತಿಗಳು ಸೇವೆ ಸಲ್ಲಿಸಿದರೆ ದೇಶ ಸದೃಢವಾಗಿ ರೂಪುಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಎಸ್‌ಜೆಆರ್ ಐಟಿಐ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್.ಆರ್.ಆನಂದ್ ಅವರು ಕಳೆದ 38 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.
ರೋಟರಿ ಸಂಸ್ಥೆಯ ನೂತನ ಕಾರ್ಯದರ್ಶಿ ನಟರಾಜ್ ಶೆಟ್ಟಿ ಅವರು ಕ್ರಿಯಾಶೀಲರಾಗಿದ್ದು ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಬಂಟರ ಸಂಘದ ಗೌರವಾಧ್ಯಕ್ಷ ರಾ.ವೆಂಕಟೇಶ್ ಶೆಟ್ಟಿ, ಯುವ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ರೈ, ಪದಾಧಿಕಾರಿಗಳಾದ ವಿದ್ಯಾ ಶೆಟ್ಟಿ, ಸನತ್ ಶೆಟ್ಟಿ, ನಾರಾಯಣ ಶೆಟ್ಟಿ, ರವಿಕುಮಾರ್, ಕೃಷ್ಣಮೂರ್ತಿ, ನಿತೇಶ್, ಸತೀಶ್ ಮತ್ತಿತರರಿದ್ದರು