ಧರ್ಮದ ಮೂಲ ಜ್ಞಾನ ಮರೆ

ಬಾಳೆಹೊನ್ನೂರು ಸಮೀಪದ ಸೀಗೋಡಿನಲ್ಲಿ ನಡೆದ ಹಿಂದೂ ಸಮಾಜೋತ್ಸವಕ್ಕೆ ಆಗಮಿಸಿದ್ದ ಶ್ರೀ ಗುಣನಾಥ ಸ್ವಾಮೀಜಿ ಹಾಗೂ ಗಣ್ಯರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.
ಬಾಳೆಹೊನ್ನೂರು ಸಮೀಪದ ಸೀಗೋಡಿನಲ್ಲಿ ನಡೆದ ಹಿಂದೂ ಸಮಾಜೋತ್ಸವಕ್ಕೆ ಆಗಮಿಸಿದ್ದ ಶ್ರೀ ಗುಣನಾಥ ಸ್ವಾಮೀಜಿ ಹಾಗೂ ಗಣ್ಯರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.
Published on
ಬಾಳೆಹೊನ್ನೂರು: ಬ್ರಹ್ಮಾಂಡವು ನಮಗೆ ಧರ್ಮ, ಸಂಸ್ಕಾರ, ಸಂಸ್ಕೃತಿ, ಶಿಷ್ಟಾಚಾರವನ್ನು ಮಾಡುವ ಅವಕಾಶ ಕೊಟ್ಟಿದೆ. ಆದರೆ ನಾವು ಹಿಂದೂ ಧರ್ಮದ ಮೂಲ ಜ್ಞಾನವನ್ನು ಮರೆತಿದ್ದೇವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
 ಸೀಗೋಡಿನ ಸಮುದಾಯ ಭವನದಲ್ಲಿ ಹೇರೂರು, ಹಿರೇಗದ್ದೆ ಮಂಡಲ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇತ್ತೀಚಿನ ದಿನಗಳಲ್ಲಿ ಜಾತಿ ವ್ಯವಸ್ಥೆಯ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದ್ದು ನಮ್ಮಲ್ಲಿ ಆತ್ಮಪ್ರಜ್ಞೆ ಮೂಡಬೇಕಾಗಿದೆ. ಇಂಥ ಭಾವನಾತ್ಮಕ ಉತ್ಸವದಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಸೇರಿರುವುದು ಬೇಸರದ ವಿಷಯ ಎಂದರು.
ಆರ್‌ಎಸ್‌ಎಸ್ ಹಾಸನ ವಿಭಾಗದ ಪ್ರಮುಖ್ ಸುಮಂತ್ ನೆಮ್ಮಾರ್ ಮಾತನಾಡಿ, ದೇಶ, ಹಿಂದುತ್ವದ ಉಳಿವಿಗಾಗಿ ರಜಪೂತರಾದಿಯಾಗಿ ಅನೇಕರ ತ್ಯಾಗ ಬಲಿದಾನಗಳ ಇತಿಹಾಸ ನಮ್ಮ ಮುಂದಿದ್ದು ಯಾವುದೂ ಪಠ್ಯದಲ್ಲಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಮಕ್ಕಳಿಗೆ ರಾಷ್ಟ್ರಭಕ್ತಿ ಶಿಕ್ಷಣವನ್ನು ನೀಡುವ ಅಗತ್ಯವಿದ್ದು ಸರ್ಕಾರಗಳು ಈ ಕುರಿತು ಗಮನ ಹರಿಸಬೇಕಾಗಿದೆ ಎಂದರು.  
ವ್ಯಕ್ತಿ ನಿರ್ಮಾಣದ ಮೂಲಕ ಸಮಾಜ ನಿರ್ಮಾಣ ಎಂಬುದು ಆರ್‌ಎಸ್‌ಎಸ್ ಪರಿಕಲ್ಪನೆ, ಸಿದ್ಧಾಂತವಾಗಿದೆ. ನೂರಾರು ವರ್ಷಗಳಿಂದಲೂ ಅನ್ಯ ಧರ್ಮೀಯರಿಂದ ನಮ್ಮ ಸಂಸ್ಕೃತಿ, ನಂಬಿಕೆ, ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಭಾರತದ ನಾಗರಿಕತೆಯನ್ನು ನಾಶ ಮಾಡುವ ಯತ್ನವಾಗುತ್ತಿದೆ. ಯುದ್ಧ ನಮ್ಮ ಸಂಸ್ಕೃತಿಯ ಅಸವಾಗಿದ್ದು ದೇಶಭ್ರಷ್ಟ ಶಕ್ತಿಗಳನ್ನು ಸದೆಬಡಿಯಲು ಹಿಂಜರಿಯಬಾರದು ಎಂದರು.
ಸಮಾಜೋತ್ಸವದ ಆಯೋಜನಾ ಸಮಿತಿ ಸಂಚಾಲಕ ಎ.ಸಿ.ಸಂತೋಷ್ ಅರನೂರು ಮಾತನಾಡಿ, ಯಾವುದೇ ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾಜೋತ್ಸವ ಆಯೋಜಿಸಲಾಗಿದೆ ಎಂದರು.
ಜಯಪುರ ರಸ್ತೆಯ ಕಮಾನು ಮೋರಿಯಿಂದ ಸೀಗೋಡಿನವರೆಗೆ ನೂರಾರು ಕಾರ್ಯಕರ್ತರು ವಿವಿಧ ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ನಡೆಸಿದರು. ಕಾಫಿ ಬೆಳೆಗಾರ ರಾಘವೇಂದ್ರ ಗುರುಪ್ರಸಾದ್ ಹೆಬ್ಬಾರ್, ಹಿರೇಗದ್ದೆ ಗ್ರಾಪಂ ಸದಸ್ಯೆ ಸುಮಾ, ಬಬ್ಬುಸ್ವಾಮಿ ಸೇವಾ ಸಮಿತಿಯ ಶಿವಪ್ಪ, ಕೊಪ್ಪದ ಸಂದೇಶ್, ನಾರಾಯಣಮೂರ್ತಿ, ಹುಲ್ಸೆ ರತ್ನರಾಜ್ ಜೈನ್, ಸಂಪಿಗೆಮನೆ ಪದ್ಮನಾಭ್, ಎಚ್.ಪಿ.ಕಾರ್ತಿಕ್, ವೀಣಾ ದಿನೇಶ್ ಹೆಬ್ಬಾರ್, ಧನ್ವಿ, ಎಚ್.ಎಂ.ಸುಬ್ಬಣ್ಣ, ಕೆ.ಸಿ.ವೆಂಕಟರಮಣ ನಾವಡ, ಸುಜಿತ್ ನಡ್ಳಾಳಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net