ಡಾಂಬರ್ ಕೊಚ್ಚಿಕೊಂಡು ಹೋಗಿ ಕಚ್ಚಾ ರಸ್ತೆಯಾಯ್ತು (Mudigere)

ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ರಸ್ತೆ ಡಾಂಬರ್ ಕಿತ್ತುಹೋಗಿ ಗುಂಡಿಯಾಗಿರುವುದು.
ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ರಸ್ತೆ ಡಾಂಬರ್ ಕಿತ್ತುಹೋಗಿ ಗುಂಡಿಯಾಗಿರುವುದು.
Published on
ಮೂಡಿಗೆರೆ: ಕಿರುಗುಂದ ಗ್ರಾಮದಿಂದ ಉದುಸೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ನಿರ್ವಹಣೆಯ 3 ಕಿ.ಮೀ ರಸ್ತೆಗೆ 30 ವರ್ಷದ ಹಿಂದೆ ಹಾಕಿದ್ದ ಡಾಂಬರ್ ಕಿತ್ತು ಹೋಗಿದ್ದು ಈಗ ಕಚ್ಚಾ ರಸ್ತೆ ಮಾತ್ರ ಉಳಿದಿದೆ. ಹೀಗಾಗಿ ವಾಹನ ಹಾಗೂ ಪಾದಚಾರಿಗಳ ಸಂಚಾರ ದುಸ್ತರವಾಗಿದೆ. 
ಉದುಸೆ ಮತ್ತು ಹೊತ್ತಿಕೆರೆ ಗ್ರಾಮಗಳಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಸ್ಥರು ದಿನಸಿ ಸಹಿತ ಇತರ ಪದಾರ್ಥ ತರಲು ಕಿರುಗುಂದಕ್ಕೆ ತೆರಳಬೇಕು. ಉದುಸೆ ಗ್ರಾಮದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಡ ಮುಚ್ಚಿದೆ. ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳು ಕಿರುಗುಂದ ಗ್ರಾಮದ ಮೂಲಕ ಜನ್ನಾಪುರ ಮತ್ತು ಮೂಡಿಗೆರೆ ಪಟ್ಟಣಕ್ಕೆ ಪ್ರತಿದಿನ ಗುಂಡಿಬಿದ್ದ ರಸ್ತೆಯಲ್ಲಿ ಸಾಗಬೇಕು. ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು ತಿರುಗಾಡಲು ಹರಸಾಹಸಪಡಬೇಕಾಗಿದೆ.
 ಉದುಸೆ ಗ್ರಾಮಕ್ಕೆ ಮೂಡಿಗೆರೆ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿದೆ. ರಸ್ತೆ ಸಮರ್ಪಕವಾಗಿಲ್ಲದ ಕಾರಣ ಬಸ್ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಗ್ರಾಮಸ್ಥರ ಒತ್ತಡಕ್ಕೆ ಮಣಿದು ಸಾರಿಗೆ ಸಂಸ್ಥೆಯಿಂದ ಬಸ್ ಸಂಚಾರಕ್ಕೆ ಬಿಡಲಾಗಿದೆ. ಬಸ್ ಚಾಲಕರು ಕಿರಿದಾದ ಹಾಗೂ ಗುಂಡಿಗಳೇ ತುಂಬಿರುವ ಈ ರಸ್ತೆಯಲ್ಲಿ ಸಾಗಲು ಹರಸಾಹಸಪಡುತ್ತಿದ್ದಾರೆ. ಬಾಡಿಗೆ ವಾಹನದ ಚಾಲಕರು ಹದಗೆಟ್ಟಿರುವ ಈ ರಸ್ತೆಯಲ್ಲಿ ಸಂಚರಿಸಲು ಒಪ್ಪುತ್ತಿಲ್ಲ. ಈಗಾಗಲೇ ಈ ರಸ್ತ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. 
1996ರಲ್ಲಿ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಲಾಗಿತ್ತು. ನಂತರ 2001ರಲ್ಲಿ ಉದುಸೆ ಗ್ರಾಮದ ಉಪಗ್ರಾಮವಾದ ಹೊತ್ತಿಕೆರೆ ರಸ್ತೆಗೆ ಡಾಂಬರೀಕರಣವಾಗುವಾಗ ಉದುಸೆ ರಸ್ತೆಗೆ ಅರ್ಧ ಕಿ.ಮೀ ಮಾತ್ರ 2ನೇ ಬಾರಿ ಡಾಂಬರೀಕರಣ ಮಾಡಲಾಗಿತ್ತು. ನಂತರ ಆ ರಸ್ತೆಗಳು ಮತ್ತೊಮ್ಮೆ ಡಾಂಬರನ್ನೇ ಕಂಡಿಲ್ಲ. ಈಗ ಉದುಸೆ ರಸ್ತೆ ಜತೆಯಲ್ಲಿ ಹೊತ್ತಿಕೆರೆ ಗ್ರಾಮದ ರಸ್ತೆ ಕೂಡ ಸಂಪೂರ್ಣ ಹಾಳಾಗಿದೆ. 8 ವರ್ಷದ ಹಿಂದೆ ಉದುಸೆ ರಸ್ತೆಯ ಮಧ್ಯಭಾಗದಲ್ಲಿ ಅರ್ಧ ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಉದುಸೆ ಹಾಗೂ ಹೊತ್ತಿಕೆರೆ ಗ್ರಾಮದ ರಸ್ತೆ ಡಾಂಬರ್‌ಗಳೆಲ್ಲವೂ ಕೊಚ್ಚಿ ಹೋಗಿ ವಿಪರೀತ ಗುಂಡಿಯಾಗಿ ಕಚ್ಚಾ ರಸ್ತೆಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net