ಸಿ.ಟಿ. ರವಿ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್
ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್
Published on
ಚಿಕ್ಕಮಗಳೂರು: ಎಸ್‌ಡಿಪಿಐ ಸಂಘಟನೆಯವರು ಮಾಜಿ ಶಾಸಕ ಸಿ.ಟಿ. ರವಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಅವರನ್ನು ಚಿಕ್ಕಮಗಳೂರು ನಗರಕ್ಕೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೨೭ರಂದು ಎಸ್‌ಡಿಪಿಐ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ. ರವಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಅವರನ್ನು ನಗರಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಒಬ್ಬ ರಾಜನನ್ನು ತಲುಪುವ ಮುನ್ನ ಸೈನಿಕರನ್ನು ದಾಟಬೇಕಾಗುತ್ತದೆ. ಸೈನಿಕರನ್ನೇ ಮುಟ್ಟಲು ಸಾಧ್ಯವಾಗದವರು ರಾಜನ ಬಳಿ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಎಸ್‌ಡಿಪಿಐ ಹೇಳಿಕೆಯನ್ನು ಹಿಂದೂ ಸಮಾಜ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಿ.ಟಿ.ರವಿ ಅವರು ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ದಲಿತರ ಅಭಿವೃದ್ಧಿ, ಸಮಾನತೆ ಮತ್ತು ಅಧಿಕಾರ ಸಬಲೀಕರಣಕ್ಕಾಗಿ ಅವರು ನಿರಂತರವಾಗಿ ಕೆಲಸ ಮಾಡಿದ್ದಾರೆ. ನಗರಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಸದಸ್ಯ ಹಾಗೂ ಉಪಾಧ್ಯಕ್ಷ ಸ್ಥಾನ ದೊರಕುವಂತೆ ಮಾಡಿದ ಉದಾಹರಣೆಗಳೂ ಇವೆ. ವಾಸ್ತವಾಂಶಗಳನ್ನು ತಿಳಿದು ಮಾತನಾಡುವ ಅಭ್ಯಾಸವನ್ನು ಎಸ್‌ಡಿಪಿಐ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಿ.ಟಿ. ರವಿ ಅವರು ದೇಶದ್ರೋಹಿ ಚಟುವಟಿಕೆಗಳ ವಿರುದ್ಧ ಮಾತನಾಡಿದ್ದಾರೆಯೇ ಹೊರತು ದೇಶಪ್ರೇಮಿಗಳ ವಿರುದ್ಧ ಎಂದಿಗೂ ಮಾತನಾಡಿಲ್ಲ. ಡಾ. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಹಾಗೂ ಕಾನೂನಿಗೆ ಅವರು ಸದಾ ಗೌರವ ನೀಡಿದ್ದಾರೆ. ಆದರೆ ಸಂವಿಧಾನಕ್ಕೆ ಗೌರವ ಕೊಡುವ ಕೆಲಸವನ್ನು ಎಸ್‌ಡಿಪಿಐ ಮಾಡುತ್ತಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷಗಳಾದರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಸ್ಥಳೀಯ ಕಾಂಗ್ರೆಸ್ ನಾಯಕರ ಬೆಂಬಲದಿAದ ಕೆಲ ಕಾರ್ಯಕರ್ತರು ಸಿ.ಟಿ. ರವಿಯವರನ್ನು ಓ.ಟಿ. ರವಿ, ಕೋಟಿ ರವಿ ಎಂದು ಟ್ರೋಲ್ ಮಾಡುವುದನ್ನು ಬಿಟ್ಟರೆ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ. ಕೋಟಿಗಟ್ಟಲೆ ಆಸ್ತಿ ಮಾಡುತ್ತಿರುವವರು ಯಾರು? ಗಲ್ಲಿ-ಗಲ್ಲಿಗಳಲ್ಲಿ ಬ್ರಾಂಡಿ ಶಾಪ್‌ಗಳ ಮಾಲೀಕರಾಗುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹಂಪಯ್ಯ, ರೇವನಾಥ್, ಸುರೇಶ್ ಹಾಗೂ ಕೇಶವಮೂರ್ತಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net