ಕಳಸ: ಮಂಗಳೂರಿನಿಂದ ಹೊರನಾಡಿಗೆ ಆಗಮಿಸಿದ್ದ ಪ್ರವಾಸಿಗರ ಟೆಂಪೋ ಟ್ರಾವೆಲರ್ ಶನಿವಾರ ತಡರಾತ್ರಿ ಹೊರನಾಡು ಸಮೀಪದ ಭಾಮಿ ಅಂಗಡಿ ಸೇತುವೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಾಹನದಲ್ಲಿದ್ದ ಮೂವರು ಮಕ್ಕಳು ಸೇರಿದಂತೆ ಒಟ್ಟು 13 ಮಂದಿ ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಹೊರಟಿದ್ದ ಪ್ರವಾಸಿಗರು ಮೊದಲು ಶೃಂಗೇರಿಗೆ ಭೇಟಿ ನೀಡಿ ಬಳಿಕ ಹೊರನಾಡಿಗೆ ಆಗಮಿಸಿದ್ದರು. ಹೊರನಾಡಿನಲ್ಲಿ ತಂಗಲು ತಾವು ಮುಂಚಿತವಾಗಿ ಬುಕ್ ಮಾಡಿದ್ದ ರೂಮ್‌ಗಳ ಕಡೆಗೆ ವಾಹನದಲ್ಲಿ ತೆರಳುತ್ತಿದ್ದಾಗ ಭಾಮಿ ಅಂಗಡಿ ಸೇತುವೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ.
ವಾಹನ ಸಂಪೂರ್ಣ ಉರುಳಿಬಿದ್ದಿತ್ತಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನದಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಅವರನ್ನು ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸದ್ಯ ಎಲ್ಲ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.