ನೀತಿ ನಿಯಮಗಳಿಂದ ಬಾಳಿದರೆ ಗೆಲುವು ನಿಶ್ಚಿತ (Rambhapuri )

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ 80ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ಶಿವಾನಂದ ಜಗದ್ಗುರುಗಳ ಗದ್ದುಗೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು.
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ 80ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ಶಿವಾನಂದ ಜಗದ್ಗುರುಗಳ ಗದ್ದುಗೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು.
Published on
ಬಾಳೆಹೊನ್ನೂರು: ಜಗತ್ತು ದೇವರು ಸೃಷ್ಟಿಸಿದ ಆಟದ ಮೈದಾನ. ನಾವಿಲ್ಲಿ ಆಟಗಾರರಷ್ಟೇ. ನೀತಿ-ನಿಯಮಗಳಿಂದ ಆಟ ಆಡಿದರೆ ಗೆಲುವು ನಿಶ್ಚಿತ. ನಿಯಮ ಮೀರಿ ನಡೆದಾಗ ಸೋಲು ಖಚಿತ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. 
ರಂಭಾಪುರಿ ಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ ರಂಭಾಪುರಿ ಶಿವಾನಂದ ಜಗದ್ಗುರುಗಳ 80ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಜೀವನ ದರ್ಶನ ಅಪೂರ್ವ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. 
ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ತಿಳಿಯುತ್ತದೆ. ಸೋಲು-ಗೆಲುವು ಎರಡೂ ಬದುಕಿನಲ್ಲಿ ಮುಖ್ಯ. ಜೀವನವೆಂದರೆ ನಮಗಾಗಿ ಬದುಕುವುದಲ್ಲ. ನಾವು ಬದುಕಿ ಇನ್ನೊಬ್ಬರನ್ನು ಬದುಕಲು ಬಿಡಬೇಕು. ಅದುವೇ ನಿಜವಾದ ಜೀವನ. ಹೆತ್ತ ಮಡಿಲು, ಹೊತ್ತ ಹೆಗಲು, ಅರಿವು ಮೂಡಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಮನುಷ್ಯ ಜೀವನದಲ್ಲಿ ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು ಎಂದರು. 
ಶ್ರೀ ಶಿವಾನಂದ ಜಗದ್ಗುರುಗಳ ದೂರದೃಷ್ಟಿ, ಕ್ರಿಯಾಶೀಲ ಜೀವನ, ಆದರ್ಶ ಚಿಂತನೆಗಳು ವೀರಶೈವ ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ವಂಶಸ್ಥರಾದ ಹೊಸಪೇಟೆಯ ನಿವೃತ್ತ ಉಪನ್ಯಾಸಕ ಮೃತ್ಯುಂಜಯ ರುಮಾಲೆ ಅವರು ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಜೀವನ ದರ್ಶನ ಅಪೂರ್ವ ಕೃತಿ ರಚಿಸಿ ಧರ್ಮಾಭಿಮಾನಿಗಳ ಕೈಗೆ ಕೊಟ್ಟಿರುವುದು ಸಂತೋಷದ ಸಂಗತಿ ಎಂದರು. 
 ಮೈಸೂರು ಜಪದಕಟ್ಟೆ ಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆದರ್ಶಗಳ ಆಚರಣೆಯಿದ್ದವರ ಮಾತಿಗೊಂದು ಬೆಲೆ ಮತ್ತು ತೂಕ ಬರುತ್ತದೆ. ಸಂಪತ್ತು ಅಂತಸ್ತು ತಂದು ಕೊಡಬಹುದು. ವಿದ್ಯೆ ಅರಿವು ನೀಡಬಹುದು. ಗೌರವ ತಂದುಕೊಡುವುದು ಮಾತ್ರ ನಮ್ಮ ನಡತೆಯಿಂದ ಎಂಬುದನ್ನು ಮರೆಯಬಾರದು. ಲಿಂ. ಶ್ರೀ ಶಿವಾನಂದ ಜಗದ್ಗುರುಗಳವರ ಜೀವನದ ಸಿದ್ಧಿ ಸಾಧನೆಗಳು ಅಪಾರ ಎಂದರು. 
ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು, ಅಂಬಾಜೋಗಾಯಿ ಹಿರೇಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ಹುಡುಗಿ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು, ಮಹಾರಾಷ್ಟ್ರದ ಪಾತ್ರಿಯ ಕಾಶಿನಾಥ ಶಿವಾಚಾರ್ಯರು, ಮನೂರ್ಕರ್ ಶ್ರೀ ಗುರುವಿರೂಪಾಕ್ಷ ಶಿವಾಚಾರ್ಯರು, ಅಷ್ಟಿಯ ಶ್ರೀ ವಿಶ್ವಚೈತನ್ಯ ಶಿವಾಚಾರ್ಯರು, ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು ಪಾಲ್ಗೊಂಡಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net