ಎನ್.ಆರ್.ಪುರ ತಾಲೂಕು ಮೆಣಸೂರು ಮೌಂಟ್ ಕಾರ್ಮೆುಲ್ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ಕಾನೂನು ಸಾಕ್ಷರತೆ ಕಾರ್ಯಕ್ರಮವನ್ನು ಕೆ.ಟಿ.ರಘುನಾಥ್ ಗೌಡ ಉದ್ಘಾಟಿಸಿದರು. ಜಿ.ಎಸ್.ಜೀತು, ಜಿ.ಬಿ.ನೇಕಾರ್, ಕೆ.ಜಯಪ್ರಕಾಶ್, ಸಿಸ್ಟರ್ ಶುಭಾ, ಬಿ.ನಂದೀಶ್, ಪೌಲ್‌ಚೆರಿಯನ್ ಇದ್ದರು.
ಎನ್.ಆರ್.ಪುರ: ವಿದ್ಯಾರ್ಥಿಗಳು ದೈನಂದಿನ ಬಳಕೆಗೆ ಅವಶ್ಯಕವಾಗಿರುವ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ ಗೌಡ ಹೇಳಿದರು.
ಮೆಣಸೂರು ಗ್ರಾಮದ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸಹಾಯಕ ಸರ್ಕಾರಿ ಅಭಿಯೋಜನಾ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಪರಿಸರ ಕಾನೂನು ಸಾಕ್ಷರತೆ ಹಾಗೂ ಸಮುದಾಯ ಸಂರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
18 ವಷರ್ದೊಳಗಿನವರು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬಾರದು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಚಾಲನ ಪರವಾನಗಿ, ವಾಹನ ವಿಮೆ, ವಾಹನದ ದಾಖಲೆ ಇರಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರದ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕೋ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ಜೆಎಂಎ್ಸಿ ನ್ಯಾಯಾಲಯದ ಕಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಜೀತು ಮಾತನಾಡಿ, ಭಾರತದಲ್ಲಿ 1986ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಸಂವಿಧಾನದ ಪ್ರಕಾರ ಭಾರತದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು. ಪರಿಸರಕ್ಕೆ ಪೂರಕವಾಗಿರುವ ಬಟ್ಟೆ ಬ್ಯಾಗ್, ಪೇಪರ್ ಬಳಸುವುದರ ಮೂಲಕ ಪ್ಲಾಸ್ಟಿಕ್‌ಮುಕ್ತ ದೇಶ ಮಾಡಲು ಶ್ರಮಿಸಬೇಕು ಎಂದರು.
ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ಸಿಸ್ಟರ್ ಶುಭಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್, ಸಂಪನ್ಮೂಲ ವ್ಯಕ್ತಿ ಪೌಲ್‌ಚೆರಿಯನ್, ಸರ್ಕಾರಿ ವಕೀಲ ಜಿ.ಬಿ.ನೇಕಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಪ್ರಾಚಾರ್ಯರಾದ ನಂದಿನಿ ಆಲಂದೂರು, ಅನುಷಾ ಇದ್ದರು.