ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದು

ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಜಾಗೃತಿ ಕಾರ್ಯಾಗಾರವನ್ನು ಡಾ.ಎಸ್.ಟಿ.ಅರವಿಂದ್ ಉದ್ಘಾಟಿಸಿದರು.
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಜಾಗೃತಿ ಕಾರ್ಯಾಗಾರವನ್ನು ಡಾ.ಎಸ್.ಟಿ.ಅರವಿಂದ್ ಉದ್ಘಾಟಿಸಿದರು.
Published on
ಎನ್.ಆರ್.ಪುರ: ವಿದ್ಯಾರ್ಥಿಗಳು ಸಮಾಜದಲ್ಲಿ ಸಾಧಕರಾಗಬೇಕೆ ಹೊರತು ಮಾರಕವಾಗಬಾರದು ಎಂದು ಮಾನಸಿಕ ತಜ್ಞ ಡಾ.ಎಸ್.ಟಿ.ಅರವಿಂದ್ ಹೇಳಿದರು.
ರೋಟರಿ ಕ್ಲಬ್ ಆಶ್ರಯದಲ್ಲಿ ಪಟ್ಟಣದ ಎಂಕೆಸಿಪಿಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ವ್ಯಸನ ಮುಕ್ತ ಕಾರ್ಯಾಗಾರದಲ್ಲಿ ತರಬೇತಿ ನೀಡಿ ಮಾತನಾಡಿ, ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ತಂದೆ, ತಾಯಿ ಹಾಗೂ ಪಾಲಕರು ಸಮಾಜದಲ್ಲಿ ಆದರ್ಶವಾಗಿ, ಮಾರ್ಗದರ್ಶಕರಾಗಿ ಬಾಳಬೇಕು. ಪಾಲಕರು ತಪ್ಪು ಮಾಡಿದರೆ ಮಕ್ಕಳು ಅದನ್ನು ಅನುಸರಿಸುತ್ತಾರೆ ಎಂದರು.
ಮಾನಸಿಕ ಖಿನ್ನತೆಯಿಂದ ಪ್ರಪಂಚದಲ್ಲಿ ವರ್ಷಕ್ಕೆ 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತ ದೇಶದಲ್ಲಿ 1.50 ಲಕ್ಷ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಪ್ರಮುಖ ಕಾರಣ. ಮಾನಸಿಕ ಒತ್ತಡಕ್ಕೆ ಒಳಗಾದವರು ಚಿಕ್ಕ,ಚಿಕ್ಕ ವಿಷಯವನ್ನು ನಕಾರಾತ್ಮಕವಾಗಿ ತೆಗೆದುಕೊಂಡು ಚಿಂತೆಗೆ ಒಳಗಾಗುತ್ತಾರೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಮೊಬೈಲ್‌ಗಳು ವಿದ್ಯಾರ್ಥಿಗಳ ಮೊದಲ ಮಾದಕ ವಸ್ತು. ವಿದ್ಯಾರ್ಥಿಗಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ ಜೀವನದಲ್ಲಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಗುರಿಯಾಗಿಟ್ಟುಕೊಂಡು ಸಾಧಕರಾಗಬೇಕು ಎಂದರು.
ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ವ್ಯಸನಿಗಳಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅಂತಹ ವ್ಯಕ್ತಿಗಳನ್ನು ಕುಟುಂಬದವರೂ ನಿರ್ಲಕ್ಷ್ಯದಿಂದ ನೋಡುತ್ತಾರೆ. ಮಾದಕ ವಸ್ತುಗಳ ಚಟಕ್ಕೆ ಬಿದ್ದವರ ಜೀವನ ಸರ್ವ ನಾಶವಾಗುತ್ತದೆ. ಜ್ಞಾನಕ್ಕಾಗಿ ಹಿತಮಿತವಾಗಿ ಮೊಬೈಲ್ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ರೋಟರಿ ಕ್ಲಬ್ ವಲಯ 6 ರ ಜೋನಲ್ ಲೆಪ್ಟಿನೆಂಟ್ ಬಿ.ಎಸ್.ದಿನೇಶ್, ಒಕ್ಕಲಿಗರ ಸಂಘದ ಖಜಾಂಚಿ ಎಸ್.ಎನ್.ಲೋಕೇಶ್, ರೋಟರಿ ಕ್ಲಬ್ ಕಾರ್ಯದರ್ಶಿ ಕೆ.ಪಿ.ಮನೋಜ್ ಕುಮಾರ್, ಪ್ರಾಚಾರ್ಯೆ ಪದ್ಮಾ ರಮೇಶ್, ಮಧುರ ಮಂಜುನಾಥ್, ಸೌಮ್ಯ, ಜ್ಞಾನೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net