ಶೃಂಗೇರಿಯಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಸೇವಾದೀಕ್ಷಾ ಸಮಾರಂಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಅವರು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆನಂದಸ್ವಾಮಿ, ರಮೇಶ್ ಶೂನ್ಯ, ಜ್ಯೋತಿ ಮಂಜುನಾಥ್, ಪ್ರಮೀಳಾ, ರಾಘವೇಂದ್ರ ಹೆಗಡೆ, ಶ್ರೀನಿವಾಸ್, ಸುನೀತಾ ನವೀನ್ ಗೌಡ ಇತರರಿದ್ದರು.
ಶೃಂಗೇರಿ: ಕಸಾಪ ಕಲೆ, ಸಂಗೀತ, ಜಾನಪದ, ಶರಣ ಸಾಹಿತ್ಯ ಮುಂತಾದ ಪ್ರಕಾರಗಳನ್ನು ಹೊಂದಿರುವ ವೈಶಿಷ್ಟ್ಯಪೂರ್ಣ ವ್ಯವಸ್ಥೆ. ಪಾರಂಪರಿಕ ಮೌಲ್ಯಗಳನ್ನು ಒಳಗೊಂಡ ವಿವಿಧ ಪ್ರಕಾರಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿಗೆ ಭದ್ರವಾದ ಬುನಾದಿ ನೀಡಿದ ಕೀರ್ತಿ ಕಸಾಪಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಕನ್ನಡಭವನದಲ್ಲಿ ಶನಿವಾರ ತಾಲೂಕು ಕಸಾಪ ಆಯೋಜಿಸಿದ್ದ ಸೇವಾದೀಕ್ಷಾ ಸಮಾರಂಭದಲ್ಲಿ ಮಾತನಾಡಿದರು. ಅದ್ಭುತ ಪರಿಕಲ್ಪನೆ ಹೊಂದಿದ ಸಾಹಿತ್ಯ ಪರಿಷತ್ ನಾಡು, ನುಡಿ, ಸಂಸ್ಕೃತಿಗಾಗಿ ಸದಾ ಸೇವೆ ಸಲ್ಲಿಸುತ್ತಿದ್ದು ರಾಜ್ಯ ಮಟ್ಟದಲ್ಲಿ ಶೃಂಗೇರಿ ಕಸಾಪಕ್ಕೆ ಅನನ್ಯ ಸ್ಥಾನವಿದೆ. ವರ್ಷಪೂರ್ತಿ ನಿರಂತರ ಕನ್ನಡ ಸೇವೆ ಮಾಡುತ್ತ ಕನ್ನಡ ಭಾಷೆಯ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದೆ. ಸಮ್ಮೇಳನದ ಜತೆ ಕಥಾ, ಕಾವ್ಯ, ಕಮ್ಮಟಗಳನ್ನು ಹಮ್ಮಿಕೊಳ್ಳಬೇಕಿದೆ. ಸಾಹಿತ್ಯ ಮನಸ್ಸುಗಳನ್ನು ಅರಳಿಸಬೇಕು. ಅದು ನಮ್ಮ ಮಾನಸಿಕ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಅಪರೂಪದ ಹಾದಿ ಎಂದರು.
ಜಿಲ್ಲಾ ಕಸಾಪ ಸಂಚಾಲಕಿ ಪುಷ್ಪಾ ಲಕ್ಷ್ಮೀನಾರಾಯಣ್ ಮಾತನಾಡಿ, 1915ರಲ್ಲಿ ಮೈಸೂರಿನ ಕೃಷ್ಣರಾಜ್ ಒಡೆಯರ್ ಅವರಿಂದ ಸ್ಥಾಪಿತಗೊಂಡ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂಬ ಹೆಸರಿಂದ ಪ್ರಾರಂಭಗೊಂಡ ಸಂಸ್ಥೆಗೆ ಶತಮಾನಗಳ ಇತಿಹಾಸವಿದೆ. ಕನ್ನಡ ಭಾಷೆಯ ವೈಭವವನ್ನು ರಾಜ್ಯ ಹಾಗೂ ಗ್ರಾಮ ಮಟ್ಟದಲ್ಲೂ ತಲುಪಿಸಿದ ಕೀರ್ತಿ ಕಸಾಪಕ್ಕೆ ಸಲ್ಲಬೇಕು. ನಾವು ನಡೆಸುವ ಸಮ್ಮೇಳನಗಳಲ್ಲಿ ಸಾಹಿತ್ಯಿಕ ವಾತಾವರಣ ಇರಬೇಕು ಎಂದು ತಿಳಿಸಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗಡೆ ಪುಷ್ಪಾರ್ಚನೆ ಮಾಡಿದರು. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಕಸಬಾ ಹೋಬಳಿ ಅಧ್ಯಕ್ಷ ದಿನೇಶ್ ಅಂಗುರ್ಡಿ, ಯುವ ಘಟಕದ ಅಧ್ಯಕ್ಷ ಸಚಿನ್, ಸಾಹಿತಿ ಬಿ.ಶಿವಶಂಕರ್ ಇದ್ದರು.