ಬಾಳೆಹೊನ್ನೂರು ಸಮೀಪದ ತೆಂಗಿನಮನೆ ಬೆಳವಾಡಿ ಸುರೇಶ್ ಕೃಷಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಳುಮೆಣಸು, ಕಾಫಿ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಗಿಡಗಳಿಗೆ ಮಂಜಿನ ರೂಪದಲ್ಲಿ ಔಷಧ ಸಿಂಪಡಣೆ ಮಾಡುವ ಲ್ಯಾನ್ಸ್ ಪ್ರದರ್ಶನ ಮಾಡಲಾಯಿತು. ಎಚ್.ವಿ.ಪ್ರದೀಪ್‌ಕುಮಾರ್, ಕೆ.ಎಸ್.ಸತ್ಯಪ್ರಕಾಶ್, ಕೆ.ಪಿ.ವಿಶ್ವನಾಥ್, ಕೆ.ಸಿ.ಮಧುಕುಮಾರ್ ಇತರರಿದ್ದರು.
ಬಾಳೆಹೊನ್ನೂರು: ರೈತರು ಪ್ರತಿವರ್ಷ ಕಾಲಕ್ಕನುಗುಣವಾಗಿ ಜಮೀನಿನ ಮಣ್ಣಿನ ಪರೀಕ್ಷೆ ನಡೆಸಿ ಕೊರತೆ ಕಂಡುಬಂದ ಪೋಷಕಾಂಶಗಳನ್ನು ನೀಡಬೇಕು ಎಂದು ಕೃಷಿ ತಾಂತ್ರಿಕ ಸಲಹೆಗಾರ ಸುನೀಲ್ ತಮಗಾಳೆ ಹೇಳಿದರು.
ತೆಂಗಿನಮನೆ ಸಮೀಪದ ಬೆಳವಾಡಿ ಸುರೇಶ್ ಅವರ ಕೃಷಿ ಕ್ಷೇತ್ರದಲ್ಲಿ ಇಂಡಿಯನ್ ಪೆಪ್ಪರ್ ಲೀಗ್ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮಳೆ ಸ್ಥಗಿತಗೊಂಡ 2 ಅಥವಾ 3 ತಿಂಗಳಲ್ಲಿ ಜಮೀನಿನ ನಿರ್ದಿಷ್ಟ ಭಾಗದಿಂದ ಮಣ್ಣು ತೆಗೆದು ಪರೀಕ್ಷೆ ನಡೆಸಿ ಅಗತ್ಯಕ್ಕೆ ತಕ್ಕಷ್ಟು ಪೋಷಕಾಂಶ ನೀಡಬೇಕು. ಮಣ್ಣು ಪರೀಕ್ಷೆ ನಡೆಸಿದ ಜಾಗದ ಬಳಿಯಲ್ಲಿನ ಕಾಫಿ ಗಿಡದ ನಾಲ್ಕೂ ಬದಿಗಳಿಂದ 40 ಎಲೆಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕು. ಆಗ ಮಾತ್ರ ನಿಖರವಾದ ಲಿತಾಂಶ ಲಭ್ಯವಾಗಲಿದೆ. ಅ.15ರೊಳಗೆ ಗೊಬ್ಬರ, ನವೆಂಬರ್‌ನಲ್ಲಿ ಸುಣ್ಣ ನೀಡುವುದು ಸೂಕ್ತ ಎಂದರು.
ಸಸ್ಯಮಿತ್ರ ನರ್ಸರಿ ಮಾಲೀಕ ಶಶಿಧರ್ ಸಕ್ರೆಮಕ್ಕಿ ಮಾತನಾಡಿ, ನರ್ಸರಿಯಲ್ಲಿ ಬುಟ್ಟಿ ತುಂಬಿಸಲು ಸುಡುಮಣ್ಣು ಬಳಕೆ ಮಾಡುತ್ತೇವೆ. ಇದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನರ್ಸರಿಯಲ್ಲಿ ಗಿಡ ಬೆಳೆಸುವ ಮುನ್ನ ಮೂಲ ತಳಿಯ ಗುಣಮಟ್ಟದ ಆಯ್ಕೆಗೆ ಹೆಚ್ಚಿನ ಗಮನ ನೀಡಬೇಕು. ನರ್ಸರಿ ಒಳಗೆ ನೀರಿನ ತೇವಾಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಕಾಳುಮೆಣಸು ಕಡ್ಡಿಗಳನ್ನು ಬುಟ್ಟಿಯಲ್ಲಿ ತುಂಬಿಸುವ ಮುನ್ನ ಶೀಲೀಂಧ್ರ ನಾಶಕದಲ್ಲಿ ಅದ್ದಬೇಕು. ಬುಟ್ಟಿಗೆ ಸುಡುಮಣ್ಣಿನ ಜತೆಗೆ ಕಾಡುಮಣ್ಣು ಬೆರೆಸಬಹುದು. ನರ್ಸರಿಯಿಂದ ಗಿಡಗಳನ್ನು ನೇರವಾಗಿ ತೋಟಕ್ಕೆ ತೆಗೆದುಕೊಂಡು ಹೋಗಿ ನಾಟಿ ಮಾಡಬೇಕು ಎಂದು ಸಲಹೆ ನೀಡಿದರು.
ಮಣ್ಣು ಪರೀಕ್ಷೆ ಮಾದರಿ ತೆಗೆಯುವ ಆಗಾರ್ ಎಂಬ ವಿಶಿಷ್ಟ ಸಾಧನ ಹಾಗೂ ಕಾಫಿ ಗಿಡದ ಕೆಳಭಾಗದಿಂದ ಮಂಜಿನ ರೂಪದಲ್ಲಿ ಔಷಧ ಸಿಂಪಡಣೆ ನಡೆಸುವ ಯಂತ್ರದ ಪ್ರಾತ್ಯಕ್ಷಿತೆ ನಡೆಸಲಾಯಿತು. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆಯ ರೈತರು ಭಾಗವಹಿಸಿದ್ದರು.
ಇಂಡಿಯನ್ ಪೆಪ್ಪರ್ ಲೀಗ್ ಅಧ್ಯಕ್ಷ ಎಚ್.ವಿ.ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಕೆ.ಎಸ್.ಸತ್ಯಪ್ರಕಾಶ್, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರಾದ ಶಿರಾಂಕ್ ಹೆಗ್ಡೆ, ಕೆ.ಸಿ.ಮಧುಕುಮಾರ್, ಎಚ್.ಎಂ.ಚನ್ನಕೇಶವ, ಶ್ರೀಕಾಂತ್ ಇದ್ದರು.