

ಪ್ರಮುಖ ಮುಖ್ಯಾಂಶಗಳು
ಶೃಂಗೇರಿ: ಷೇರುದಾರರಿಗೆ ಸಹಕಾರ ಕ್ಷೇತ್ರ ನಮ್ಮದು ಎಂದು ಭಾವನೆ ಮೂಡಬೇಕು. ಷೇರುದಾರರು ಕೈಜೋಡಿಸಿದರೆ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸೋಮವಾರ ಬೆಟ್ಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸಹಕಾರ ತತ್ವದಲ್ಲಿ ವಿಶೇಷ ನಂಬಿಕೆ ಹಾಗೂ ಬದ್ಧತೆಯಿತ್ತು. ಸಹಕಾರ ತತ್ವದ ಮೂಲಕ ಭವ್ಯ ಭಾರತದ ಕನಸನ್ನು ನನಸನ್ನಾಗಿ ಮಾಡಿಕೊಳ್ಳಬಹುದು ಎಂಬ ಆಶಯ ಅವರಲ್ಲಿತ್ತು. ಸಹಕಾರ ಸಂಸ್ಥೆಗಳು ಲಾಭ ಗಳಿಸುವ ಗುರಿ ಜತೆಗೆ ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಷೇರುದಾರರ ಏಳಿಗೆಗಾಗಿ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಕೂತುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ನಾಗೇಶ್ ಮಾತನಾಡಿ, ಸಣ್ಣ ಮಟ್ಟದಲ್ಲಿದ್ದ ಸಂಘವನ್ನು ಬೆಳೆಸಲು ಅಧ್ಯಕ್ಷ ರಮೇಶ್ ಭಟ್ 25 ವರ್ಷಗಳಿಂದ ಅವಿರತವಾಗಿ ಶ್ರಮಿಸಿದ್ದಾರೆ. ಸಹಕಾರ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸ ಅಗತ್ಯವಿದೆ. ರೈತರ ಸಮಸ್ಯೆ ಪರಿಹರಿಸಲು ಸಹಕಾರ ಸಂಸ್ಥೆಗಳು ಇರಬೇಕು ಎಂದರು.
ಸಂಘದ ನೂತನ ಅಧ್ಯಕ್ಷ ಕೆ.ಎಂ.ರಮೇಶ್ ಭಟ್ ಮಾತನಾಡಿ, ಜಪಾನ್ ಸಣ್ಣ ದೇಶವಾದರೂ ಸಹಕಾರ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದಿದೆ. 1959ರಲ್ಲಿ ಸಹಕಾರ ಕ್ಷೇತ್ರದಲ್ಲಿ 30 ತಿದ್ದುಪಡಿ ಮಾಡಲಾಗಿತ್ತು. ಪ್ರಸ್ತುತ ಸಂಘದಲ್ಲಿ 1330 ಷೇರುದಾರರಿದ್ದು ವಾರ್ಷಿಕ 12 ಕೋಟಿ ರೂಪಾಯಿಯಷ್ಟು ವಹಿವಾಟು ನಡೆಯುತ್ತದೆ. ಐದು ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಷೇರುದಾರರ ಸಹಕಾರದಿಂದ ಅವಿರೋಧವಾಗಿ ಐದನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಂಘವು ಸಹಕಾರಿಗಳಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನೆಮ್ಮಾರ್ ದಿನೇಶ್, ಹಾಲಂದೂರು ಪಿಎಸಿಎಸ್ ಅಧ್ಯಕ್ಷ ಎಂ.ಎಚ್.ನಟರಾಜ್, ಬೆಟ್ಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೆ.ಎ.ನಾಗೇಶ್, ನಿರ್ದೇಶಕರಾದ ಕೆ.ಜಿ.ಸತೀಶ್, ಎಚ್.ಪಿ.ಶ್ಯಾಮಣ್ಣ, ಟಿ.ಎಚ್.ರಾಜಶೇಖರ ಇತರರಿದ್ದರು.