ಮನೆಯೊಳಗೆ ಕೊಳಚೆ ನೀರು

ಬಾಳೆಹೊನ್ನೂರಿನ ಅಕ್ಷರನಗರದ 5ನೇ ಕ್ರಾಸ್ ಮನೆಗಳ ಹಿಂಭಾಗದಲ್ಲಿ ಕೊಳಚೆ ನೀರು ನಿಂತಿರುವುದು.
ಬಾಳೆಹೊನ್ನೂರಿನ ಅಕ್ಷರನಗರದ 5ನೇ ಕ್ರಾಸ್ ಮನೆಗಳ ಹಿಂಭಾಗದಲ್ಲಿ ಕೊಳಚೆ ನೀರು ನಿಂತಿರುವುದು.
Published on
ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರನಗರದ 5ನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬರು ಚರಂಡಿ ಬಂದ್ ಮಾಡಿರುವ ಕಾರಣ ಹಲವು ಮನೆಗಳ ಒಳಗೆ ಕೊಳಚೆ ನೀರು ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಕ್ಷರನಗರದ 5ನೇ ಕ್ರಾಸ್‌ನ ಎಡಬದಿಯಲ್ಲಿ ಇರುವ ಮನೆಗಳ ಹಿಂಬದಿಯಲ್ಲಿ ಕಳೆದ 35 ವರ್ಷಗಳ ಹಿಂದಿನಿಂದಲೂ ಕೊಳಚೆ ನೀರು ಹೋಗಲು ಚರಂಡಿಯಿದ್ದು ಇದನ್ನು ಕಳೆದ ಕೆಲವು ದಿನಗಳ ಹಿಂದೆ ಇದೇ ಲೈನಿನ ಕೊನೆಯಲ್ಲಿರುವ ದೊರೆಸ್ವಾಮಿ ಎಂಬುವರು ಮುಚ್ಚಿದ್ದಾರೆ.
ಇದರಿಂದಾಗಿ ಕಳೆದ ಕೆಲ ದಿನಗಳಿಂದ ಕೆಲ ಮನೆಗಳ ಕೊಳಚೆ ನೀರು ಚರಂಡಿಯಲ್ಲಿ ಮುಂದೆ ಸಾಗದೆ ಹಲವು ಮನೆಗಳ ಒಳಗಡೆ ಕೊಳಚೆ ನೀರು ಬರುತ್ತಿದೆ. ಇದೀಗ ಮಳೆಯೂ ಬರುತ್ತಿರುವುದರಿಂದ ಮಳೆ ನೀರು ಸಹ ಮನೆಯೊಳಗೆ ಬರುತ್ತಿದೆ. ನೀರು ಸರಾಗವಾಗಿ ಮುಂದೆ ಹರಿಯದೆ ಚರಂಡಿ, ಮನೆಯೊಳಗೆ ಕೆಲ ದಿನಗಳಿಂದ ನಿಂತಿರುವುದರಿಂದ ನೀರಿನಲ್ಲಿ ಕ್ರಿಮಿಕೀಟಗಳು ಉತ್ಪತ್ತಿಯಾಗಿ ಆರೋಗ್ಯ ಸಮಸ್ಯೆಯೂ ಉಂಟಾಗಿದೆ. ಕೆಲ ಮನೆಗಳ ಗೋಡೆಗಳು ತೇವಾಂಶ ಹೆಚ್ಚಾಗಿ ಕುಸಿಯುವ ಆತಂಕ ಎದುರಾಗಿದೆ.
ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಪಂ, ತಹಸೀಲ್ದಾರ್, ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಿ ಸ್ಥಳೀಯರಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net