ಶೃಂಗೇರಿ: ಪ್ರಸ್ತುತ ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆ ಆಗುವ ಪರಿಣಾಮದಿಂದ ಸ್ಥಳೀಯ ಮೀನುಗಳ ಸಂತಾನೋತ್ಪತ್ತಿಗೆ ಅಗತ್ಯವಾದ ನೈಸರ್ಗಿಕ ಆವಾಸಗಳು ನಾಶವಾಗುತ್ತಿದ್ದು ಜಲವೈವಿಧ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಮೆಣಸೆ ಗ್ರಾಪಂ ಮಾಜಿ ಸದಸ್ಯ ತ್ರಿಮೂರ್ತಿ ಹೇಳಿದರು.
ನೆಮ್ಮಾರಿನ ಅಜ್ರಸ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಪಶ್ಚಿಮಘಟ್ಟದ ಉಭಯಚರ ಸಂರಕ್ಷಣೆಯ ಜಾಗೃತಿ ಮೂಡಿಸುವ ‘ಅಜಸ್ರ ್ರಾಗ್ ವಾಕ್-2026’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಹಳ ವರ್ಷಗಳ ಹಿಂದೆ ಪರಿಸರದಲ್ಲಿ ವಾಸವಾಗಿದ್ದ ದ್ವಿವರ್ಣದ ಕಪ್ಪೆ ಕಾಣೆಯಾಗಿದ್ದು ಆತಂಕಕಾರಿ ಆಗಿದೆ. ಇಂತಹ ಕಾರ್ಯಕ್ರಮಗಳು ಪ್ರಸ್ತುತ ತೀರಾ ಅಗತ್ಯವಿದ್ದು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಜೀವವೈವಿಧ್ಯ ಸಂಶೋಧನೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಡಾ. ಕೃಷ್ಣಕುಲಕರ್ಣಿ ಮಾತನಾಡಿ, ಕೃಷಿಯಲ್ಲಿ ಅತಿಯಾಗಿ ಬಳಸುವ ಕೀಟನಾಶಕಗಳಿಂದ ಉಭಯಚರಗಳಲ್ಲಿ ಅಂಗವೈಕಲ್ಯ, ಬೆಳವಣಿಗೆ ದೋಷಗಳು ಹೆಚ್ಚಾಗಿವೆ. ಉಭಯಚರಗಳು ಪರಿಸರದ ಆರೋಗ್ಯಕ್ಕೆ ಪೂರಕವಾಗಿದ್ದು ಅದರ ಸಂರಕ್ಷಣೆ ಪ್ರಸ್ತುತ ಸನ್ನಿವೇಶದಲ್ಲಿ ಅತಿ ಅಗತ್ಯ ಎಂದರು.
ಮಣಿಪಾಲದ ಡಾ. ಶಶಾಂಕ್ ಬೋರ್ಕರ್ ಮಾತನಾಡಿ, ಕಪ್ಪೆಗಳ ಧ್ವನಿಗಳನ್ನು ಆಲಿಸಿ ಅವುಗಳ ಜಾತಿಗಳನ್ನು ಗುರುತಿಸುವ ವಿಧಾನ, ಜೀವವೈವಿಧ್ಯ ದಾಖಲಾತಿಯಲ್ಲಿ ಧ್ವನಿಶಾಸದ ಮಹತ್ವ ಹಾಗೂ ಹವಾಮಾನ ಬದಲಾವಣೆಯಿಂದ ಉಭಯಚರಗಳ ಸಂತಾನೋತ್ಪತ್ತಿ, ವಲಸೆ ಮತ್ತು ಬದುಕಿನ ಕುರಿತು ಆಗುವ ಪರಿಣಾಮದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುಣೆ, ಬೆಂಗಳೂರು, ಮಂಗಳೂರು ಮುಂತಾದ ನಗರಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಡಾ. ಅಭಿಜಿತ್, ಉಪಾಧ್ಯಕ್ಷ ಕೇಶವಮೂರ್ತಿ, ಕೋಶಾಧ್ಯಕ್ಷ ವಿಶ್ವಜಿತ್, ಕಾರ್ಯದರ್ಶಿ ಶಶಾಂಕ್ ಉಪಸ್ಥಿತರಿದ್ದರು.