ಮೂಡಿಗೆರೆ: ಗಣರಾಜ್ಯೋತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಮಂಗಳವಾರ ತಾಲೂಕು ಕಚೇರಿಯಲ್ಲಿ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ವಿದ್ಯಾರ್ಥಿಗಳ ಭಾಗವಹಿಸುವಿಕೆ, ಸಾರ್ವಜನಿಕರ ಸಹಕಾರ, ಭದ್ರತಾ ಕ್ರಮಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರ ಪಟ್ಟಿ ತಯಾರಿಸುವ ಬಗ್ಗೆ ಚರ್ಚೆ ನಡೆಯಿತು.
ಸಾಧಕರಿಗೆ ಸನ್ಮಾನ ವಿಚಾರ ಬಂದಾಗ ವಿವಿಧ ಸಂಘಸಂಸ್ಥೆಗಳ ಮುಖಂಡರು ಮಾತನಾಡಿ, ಈ ಹಿಂದೆ ಬೇಕಾಬಿಟ್ಟಿಯಾಗಿ ಸನ್ಮಾನಿತರ ಪಟ್ಟಿ ತಯಾರಿಸಿ ಗೌರವಿಸಲಾಗಿದೆ. ಇದು ಮರುಕಳಿಸಬಾರದು. ಸನ್ಮಾನಿತರು ಸಾಧನೆ ಜತೆಗೆ ಉತ್ತಮ ವ್ಯಕ್ತಿತ್ವ ಹೊಂದಿರಬೇಕು ಎಂದು ಸಭೆಯ ಗಮನ ಸೆಳೆದರು.
ನಯನಾ ಮೋಟಮ್ಮ ಮಾತನಾಡಿ, ಎಲ್ಲ ಸಂಘ ಸಂಸ್ಥೆ ಮುಖಂಡರನ್ನು ಕರೆದು ಮತ್ತೊಂದು ಸಭೆ ನಡೆಸಿ ಅರ್ಹರನ್ನು ಆಯ್ಕೆ ಮಾಡಬೇಕು. ಎಲ್ಲ ಇಲಾಖೆಯಲ್ಲಿ ಹಿಂದಿನ ದಿನವೇ ದೀಪಾಲಂಕಾರ ಮಾಡಬೇಕು. ಸಣ್ಣಪುಟ್ಟ ಗೊಂದಲ ನಿವಾರಿಸಿಕೊಂಡು ಸಂವಿಧಾನಾತ್ಮಕ ಮೌಲ್ಯ ಪ್ರತಿಬಿಂಬಿಸುವ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪ್ಪದೆ ಹಾಜರಿರಬೇಕು ಎಂದು ತಿಳಿಸಿದರು.