ಶೃಂಗೇರಿ ತಾಲೂಕಿನ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಆರ್ಥಿಕ ನಿರ್ವಹಣೆ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕಿ ಸುರಕ್ಷಾ ಶ್ಯಾನುಬೋಗ್ ಮಾತನಾಡಿದರು. ಎಚ್.ಎಸ್.ನಟೇಶ್, ಭಾರತೀ, ಆಶಾಲತಾ ಇದ್ದರು.
ಶೃಂಗೇರಿ: ಆರ್ಥಿಕ ನಿರ್ವಹಣೆಯಲ್ಲಿ ಎಡವಿದಾಗ ನಾವೇ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೇವೆ. ಸಮರ್ಪಕ ಆರ್ಥಿಕ ವ್ಯವಹಾರ ನಡೆಸುವುದರಿಂದ ಜೀವನಕ್ಕೆ ಭದ್ರತೆ ದೊರಕುತ್ತದೆ ಎಂದು ಲೆಕ್ಕ ಪರಿಶೋಧಕಿ ಸುರಕ್ಷಾ ಶ್ಯಾನುಬೋಗ್ ಹೇಳಿದರು.
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ರೋಟರಿ ಕ್ಲಬ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಆರ್ಥಿಕ ಸಾಕ್ಷರತೆ ಹಾಗೂ ನಿರ್ವಹಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ನಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದಾಗ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಉಳಿತಾಯ ಮಾಡುವುದನ್ನು ರೂಢಿಸಿಕೊಂಡು ಅದನ್ನು ಸಮರ್ಥವಾಗಿ ಹೂಡಿಕೆ ಮಾಡಬೇಕು. ಕೆಲವೊಮ್ಮೆ ಸಾಲ ಮಾಡುವುದು ಅನಿವಾರ್ಯವಾದರೂ ದುಂದು ವೆಚ್ಚಕ್ಕಾಗಿ ಸಾಲ ಮಾಡಬಾರದು. ನಮ್ಮ ದೈನಂದಿನ ಖರ್ಚಿನ ವಿವರವನ್ನು ದಾಖಲಿಸಿಕೊಳ್ಳಬೇಕು. ಜೀವ ವಿಮೆ, ಆರೋಗ್ಯ ವಿಮೆ ಹೊಂದುವುದರಿಂದ ನಮಗೆ ಹೆಚ್ಚಿನ ಭದ್ರತೆ ದೊರಕುತ್ತದೆ ಎಂದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಸೌಮ್ಯಶ್ರೀ ಮಾತನಾಡಿ, ರಿಸರ್ವ್ ಬ್ಯಾಂಕ್ ಆ್ ಇಂಡಿಯಾದ ಮೇಲ್ವಿಚಾರಣೆಯಲ್ಲಿ ಎಲ್ಲ ತಾಲೂಕು ಕೇಂದ್ರದಲ್ಲಿ ಸಾಕ್ಷರತಾ ಕೇಂದ್ರವಿದ್ದು ಜನ ಸಾಮಾನ್ಯರಿಗೆ ಆರ್ಥಿಕ ನಿರ್ವಹಣೆ ಮಾಹಿತಿ ನೀಡಲಾಗುತ್ತದೆ. ತಂತ್ರಜ್ಞಾನ ಬೆಳೆದಂತೆ ಮೋಸ ಮಾಡುವವರ ಜಾಲ ಹೆಚ್ಚುತ್ತಿದ್ದು ಮೊಬೈಲ್‌ಗೆ ಬಂದಿರುವ ಒಟಿಪಿ ಹಂಚಿಕೊಳ್ಳುವುದು, ಎಟಿಎಂ ಕಾರ್ಡ್ ಖಾಸಗಿ ಪಿನ್ ಹೇಳುವುದರಿಂದ ನಮ್ಮ ಖಾತೆಯ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಾರೆ. ಅಪರಿಚಿತ ವ್ಯಕ್ತಿಗಳಿಗೆ ಬ್ಯಾಂಕಿನ ನಮ್ಮ ಮಾಹಿತಿ ನೀಡಬಾರದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ, ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗ್ಡೆ, ಪ್ರಾಚಾರ್ಯೆ ಭಾರತಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಆಶಾಲತಾ, ಉಪನ್ಯಾಸಕರಾದ ಮರಿಸ್ವಾಮಿ, ಆಶಾ, ಕೆ.ಎಲ್.ಗೋಪಾಲಕೃಷ್ಣ ಇದ್ದರು.