ಬೆಂಗಳೂರು-ಹೊನ್ನಾವರ (ಬಿಎಚ್ ರಸ್ತೆ) ರಸ್ತೆಯ ಬೈಪಾಸ್ ರಸ್ತೆ ಹಾದು ಹೋಗಿರುವ ಮಲ್ಲೇಶ್ವರ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಇನ್ನೂ ವ್ಯವಸ್ಥಿತವಾಗಿಲ್ಲ. ಪಟ್ಟಣಕ್ಕೆ ಪ್ರವೇಶ ಮಾಡುವ ಜಾಗದಲ್ಲಿರುವ ವೇದಾ ನದಿ ಸೇತುವೆಯ ಎರಡೂ ಕಡೆ ಗುಂಡಿಗಳಿದ್ದು ರಸ್ತೆಯೂ ಕಿರಿದಾಗಿದೆ. ಅಲ್ಲಿ ಸುರಕ್ಷಿತ ವಾಹನ ಸಂಚಾರ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಬರುವ ತಂಗಲಿ ಕ್ರಾಸ್ ಬಳಿ ರಸ್ತೆಯೇ ಇಲ್ಲದಾಗಿದೆ. ಹೆದ್ದಾರಿಯಿಂದ ತಂಗಲಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾಗುವುದೇ ಹರಸಾಹಸವಾಗಿದೆ. ಇಡೀ ರಸ್ತೆ ಗುಂಡಿಗಳಿಂದ ಕೂಡಿದ್ದು, ಇದೇ ರಸ್ತೆ ಚಿಕ್ಕ ತಂಗಲಿ, ಕಾನುಗೊಂಡನಹಳ್ಳಿ, ಮಲ್ಲಿದೇವಿಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯ ಆರಂಭದ ಸುಮಾರು ಒಂದೂವರೆ ಕಿ.ಮೀ. ರಸ್ತೆ ಪೂರ್ಣ ಹದಗೆಟ್ಟಿದೆ. ಇದರಿಂದ ಈ ಭಾಗದ ಗ್ರಾಮಸ್ಥರಿಗೆ ತೊಂದರೆಯಾಗಿದೆ.