ಮಣ್ಣು ಕುಸಿತದ ಭೀತಿಯಲ್ಲಿ ನವಗ್ರಾಮ ಸೈಟ್ ನಿವಾಸಿಗಳು

ನವ ಗ್ರಾಮದ ನಿವಾಸಿಗಳ ಮನೆ ಸಮೀಪ ಮಣ್ಣು ಕುಸಿದಿರುವುದು.
ನವ ಗ್ರಾಮದ ನಿವಾಸಿಗಳ ಮನೆ ಸಮೀಪ ಮಣ್ಣು ಕುಸಿದಿರುವುದು.
Published on
ಜಯಪುರ: ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಗೇಶ್ವರ ನವಗ್ರಾಮ ಸೈಟ್‌ನ ನಿವಾಸಿಗಳು ಕಳೆದ ಎಂಟು ವರ್ಷಗಳಿಂದ ಮನೆಗಳ ಮುಂಭಾಗ ಹಾಗೂ ಹಿಂಭಾಗದ ಮಣ್ಣು ಕುಸಿಯುವ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ.
2000ರಲ್ಲಿ ಮನೆಗಳಿಲ್ಲದ ಬಡ, ಕೂಲಿ ಕಾರ್ಮಿಕರಿಗಾಗಿ ಅಂದಿನ ಶಾಸಕ ಎಚ್.ಜಿ.ಗೋವಿಂದೇಗೌಡರು ಜಯಪುರ ಗ್ರಾಮದ ಸರ್ವೇ ನಂಬರ್ 56ರಲ್ಲಿ ನಿವೇಶನಕ್ಕಾಗಿ ಜಾಗ ಮಂಜೂರು ಮಾಡಿಸಿದ್ದರು. ನಂತರ ಶಾಸಕ ಡಿ.ಬಿ.ಚಂದ್ರೆಗೌಡರ ಕಾಲದಲ್ಲಿ 17 ಬಡ ಕಾರ್ಮಿಕರಿಗೆ ನೀವೇಶನಗಳ ಹಕ್ಕುಪತ್ರವನ್ನು ನೀಡಲಾಗಿತ್ತು. ನಂತರ ನವಗ್ರಾಮದಲ್ಲಿ ಮನೆಗಳನ್ನು ಜನರು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ.
2018ರಲ್ಲಿ ಭಾರಿ ಮಳೆಗೆ ಮೊದಲ ಭಾರಿ ಇಲ್ಲಿನ ಮನೆಗಳ ಮೇಲೆ 100 ಆಡಿಗೂ ಹೆಚ್ಚು ಎತ್ತರದಿಂದ ಗುಡ್ಡದಿಂದ ಮಣ್ಣು ಕುಸಿಯಲು ಆರಂಭವಾಗಿದೆ. ಅನಂತರ ಪ್ರತಿ ವರ್ಷ ಮಳೆಗಾಲದಲ್ಲಿ ಮಣ್ಣು ಕುಸಿತವಾಗುತ್ತಿದೆ. ಮನೆ ಮುಂಭಾಗದ ರಸ್ತೆ ಅಂಚಿನಲ್ಲಿಯೂ ಮಣ್ಣು ಕುಸಿತವಾಗುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಮನೆಗಳ ಮೇಲೆ ಮಣ್ಣು ಕುಸಿಯುವ ಆತಂಕ ಎದುರಾಗಿದ್ದು, ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ದಿನ ಕಳೆಯುವಂತಾಗಿದೆ.
ಮನೆಗಳ ಮೇಲೆ ಮಣ್ಣು ಕುಸಿತವಾದಾಗ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜೀವರಾಜ್, ಹಾಲಿ ಶಾಸಕ ರಾಜೇಗೌಡ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಅದರೆ ಈವರೆಗೆ ಯಾರೊಬ್ಬರೂ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ನೂರಾರು ಅಡಿ ಎತ್ತರದ ಕಡಿದಾದ ಬೆಟ್ಟದ ಬುಡವನ್ನು ಸಮತಟ್ಟು ಮಾಡಿರುವುದು ನಿವೇಶನ ನಿರ್ಮಾಣ ಮಾಡಿರುವುದೇ ಅವೈಜ್ಞಾನಿಕವಾಗಿದೆ.
ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಅಂದಿನ ಕೊಪ್ಪ ತಹಸೀಲ್ದಾರ್ ವಿಮಲಾ ಸುಪ್ರಿಯಾ, ಜಿಲ್ಲಾಧಿಕಾರಿ ರಮೇಶ್‌ಗೆ ಮನವಿ ಸಲ್ಲಿಸಿ ನವಗ್ರಾಮದ ಸಮೀಪದಲ್ಲಿರುವ ಸರ್ವೇ ನಂ.50 ರಲ್ಲಿ, ಎಂಟು ಎಕರೆ ಜಾಗವನ್ನು ಆಶ್ರಯ ನಿವೇಶನಕ್ಕಾಗಿ ಮಂಜೂರು ಮಾಡಿಸಿ ಜಾಗದ ಹದ್ದುಬಸ್ತ್, ಸರ್ವೇ ನಡೆಸಿ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮರಗಳ ತೆರವಿಗೆ ಮನವಿ ಮಾಡಿ ನಾಲ್ಕು ವರ್ಷ ಕಳೆದರು ಅರಣ್ಯ ಇಲಾಖೆ ಅಧಿಕಾರಿಗಳು ಡೀಮ್ಡ್ ಾರೆಸ್ಟ್, ಡಿಸಿ ರಿಸರ್ವ್ ಎಂಬ ಕುಂಟು ನೆಪ ಒಡ್ಡಿ ದಿನ ದೂಡುತ್ತಿದ್ದಾರೆ. ಕಂದಾಯ ಇಲಾಖೆ ಇದು ಗೋಮಾಳದ ಜಾಗ, ಅರಣ್ಯವಲ್ಲ ಎನ್ನುತ್ತಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಇಲ್ಲಿನ ನಿವಾಸಿಗಳ ಗೋಳು ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net