ಸ್ಮಶಾನ ಜಾಗ ಒತ್ತುವರಿ ತೆರವು

 ಉಡೇವಾ ಗ್ರಾಮದಲ್ಲಿ ಸ್ಮಶಾನ ಭೂಮಿ ಒತ್ತುವರಿಯನ್ನು ತಾಲೂಕು ಆಡಳಿತದಿಂದ ತೆರವುಗೊಳಸಲಾಯಿತು. ಪಿಎಸ್‌ಐ ರಾಜಕುಮಾರ್ ಉತ್ತಲಿ, ಆರ್.ಪ್ರಕಾಶ್, ಬಿ.ಮಂಜು ಇತರರಿದ್ದರು.
ಉಡೇವಾ ಗ್ರಾಮದಲ್ಲಿ ಸ್ಮಶಾನ ಭೂಮಿ ಒತ್ತುವರಿಯನ್ನು ತಾಲೂಕು ಆಡಳಿತದಿಂದ ತೆರವುಗೊಳಸಲಾಯಿತು. ಪಿಎಸ್‌ಐ ರಾಜಕುಮಾರ್ ಉತ್ತಲಿ, ಆರ್.ಪ್ರಕಾಶ್, ಬಿ.ಮಂಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಮಶಾನ ಭೂಮಿ
  • ಶವ ಇಟ್ಟು ಪ್ರತಿಭಟನೆ
ಲಿಂಗದಹಳ್ಳಿ: ಉಡೇವಾ ಗ್ರಾಮದ ಸರ್ವೇ ನಂಬರ್ 80ರಲ್ಲಿ 6 ಎಕರೆ 22 ಗುಂಟೆ ಸ್ಮಶಾನ ಭೂಮಿ ಒತ್ತುವರಿಯನ್ನು ತರೀಕೆರೆ ತಾಲೂಕು ಆಡಳಿತದಿಂದ ತೆರವುಗೊಳಿಸಿ ಗ್ರಾಮಸ್ಥರ ಅನುಕೂಲಕ್ಕಾಗಿ ನೀಡಲಾಯಿತು.
ರಾಜ್ಯ ಸರ್ಕಾರ ಪ್ರತಿ ಗ್ರಾಮಕ್ಕೂ ಅಗತ್ಯವಿರುವ ಸ್ಮಶಾನಭೂಮಿ ಒದಗಿಸುವುದಾಗಿ ಭರವಸೆ ನೀಡಿದ್ದರೂ ಉಡೇವಾ ಗ್ರಾಮಸ್ಥರಿಗೆ  ಸ್ಮಶಾನ ಭೂಮಿ ಇಲ್ಲದೆ ಶವ ಸಂಸ್ಕಾರ ಮಾಡಲು ತೊಂದರೆಯಾಗಿದ್ದ ಕಾರಣ ಗ್ರಾಮಸ್ಥರು ಇತ್ತೀಚೆಗೆ ಗ್ರಾಪಂ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಿಂದ ಎಚ್ಚೆತ್ತ ಕಂದಾಯ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದಾಗ ಗ್ರಾಮದ ಕೆಲ ರೈತರು ಗ್ರಾಮದ ಮೀಸಲು ಜಾಗ 6 ಎಕರೆ 22 ಗುಂಟೆ ಜಮೀನನ್ನು ಒತ್ತುವರಿ ಮಾಡಿ ಅಡಿಕೆ ಇತರ ಬೆಳೆಗಳನ್ನು ಬೆಳೆದಿರುವುದು ತಿಳಿಯಿತು. ಒತ್ತುವರಿ ತೆರವುಗೊಳಿಸಲು ಮುಂದಾದಾಗ ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದರ ಮಾಹಿತಿ ಅರಿತ ಅಧಿಕಾರಿಗಳು ಮೂಲ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒದಗಿಸಿ ತಡೆಯಾಜ್ಞೆ ತೆರವುಗೊಳಿಸಿ ಗುರುವಾರ ಒತ್ತುವರಿ ತೆರವುಗೊಳಿಸಿದರು. 
ತೆರವುಗೊಳಿಸಿದ ಜಮೀನಿನ ಸುತ್ತಲೂ ಕಂದಕ ನಿರ್ಮಿಸಿ ತಂತಿ ಬೇಲಿ ಅಳವಡಿಸಬೇಕು. ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಅಡಿಕೆ, ಆಲೂಗಡ್ಡೆ, ಜೋಳದ ಬೆಳೆ ಉಡೇವಾ ಗ್ರಾಪಂ ರಕ್ಷಿಸಬೇಕು. ಜಮೀನಿನಿಂದ ಬರುವ ಆದಾಯವನ್ನು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಳಸಿಕೊಳ್ಳುವಂತೆ ತರೀಕೆರೆ ತಹಸೀಲ್ದಾರ್ ರಶ್ಮಿ ಸೂಚನೆ ನೀಡಿದರು. 
ಭೂ ಮಾಪಕ ನಿಜಾಮ್ಮುದ್ದೀನ್, ಲಿಂಗದಹಳ್ಳಿ ಆರ್‌ಐ ಆರ್.ಪ್ರಕಾಶ್, ಅಧಿಕಾರಿಗಳಾದ ಡಿ.ಎಂ.ಕಾರ್ತೀಕ್, ಬಿ.ಮಂಜು, ರಾಜಕುಮಾರ್ ಉತ್ತಲಿ, ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net