ಶೃಂಗೇರಿಗೆ ರೈಲ್ವೆ ಮಾರ್ಗ

ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ
Published on
ಎನ್.ಆರ್.ಪುರ: ಶಿವಮೊಗ್ಗ -ಎನ್.ಆರ್.ಪುರ-ಕೊಪ್ಪ ಮಾರ್ಗವಾಗಿ ಶೃಂಗೇರಿಗೆ ರೈಲ್ವೆ ಮಾರ್ಗ ನೀಡಬೇಕು ಎಂದು ಈ ಭಾಗದಿಂದ ಸಾರ್ವಜನಿಕರು ಮನವಿ ಸಲ್ಲಿಸಿದ್ದು ಈ ಬಗ್ಗೆ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೇನೆ ಎಂದು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎನ್.ಆರ್.ಪುರ ಮಾರ್ಗವಾಗಿ ಮಂಗಳೂರಿಗೆ ರೈಲ್ವೆ ಮಾರ್ಗ ಆಗಬೇಕೆಂಬ ಪ್ರಸ್ತಾಪ ಸ್ಥಳೀಯರದ್ದಾಗಿದೆ. ಅವರ ಆಶಯಕ್ಕೆ ಸ್ಪಂದಿಸುತ್ತೇನೆ. ಶೀಘ್ರದಲ್ಲೇ ದೆಹಲಿಗೆ ಹೋಗಿ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ. ಈಗಾಗಲೇ ಪರಿಸರವಾದಿಗಳು ರೈಲ್ವೆ ಮಾರ್ಗ ಆದರೆ ಪರಿಸರ ಹಾಳಾಗುತ್ತದೆ ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.
 ಪರಿಸರಕ್ಕೆ ಹಾನಿಯಾಗದಂತೆ ರೈಲು ಮಾರ್ಗ ಮಾಡಲು ಸಾಧ್ಯವೇ ಎಂಬುದನ್ನು ರೈಲ್ವೆ ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗಿದೆ ಎಂದರು. 
ಎನ್.ಆರ್.ಪುರ ತಾಲೂಕಿನಲ್ಲಿ ರೈಲ್ವೆ ಹೋರಾಟ ಸಮಿತಿ ಮೂಲಕ ಹೋರಾಟಕ್ಕೆ ವೇದಿಕೆ ಸಿದ್ಧತೆಯಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ತಮ್ಮ ಭಾವನೆಗಳನ್ನು ಹೇಳಲಿಕ್ಕೆ ಮತ್ತು ಹೋರಾಟವಾಗಿ ಪರಿವರ್ತನೆ ಮಾಡಿ ನ್ಯಾಯ ಪಡೆಯುವ ವಿಷಯವನ್ನು ನಾನು ಒಪ್ಪುತ್ತೇನೆ. ಒಟ್ಟಾರೆಯಾಗಿ ನ್ಯಾಯ ಸಮ್ಮತವಾದ ತೀರ್ಮಾನ ಮಾಡುವುದೇ ನನ್ನ ಗುರಿ ಎಂದರು. 
ಶೃಂಗೇರಿಯಲ್ಲಿ ತಡೆಗೋಡೆ ಕುಸಿತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೃಂಗೇರಿಯಲ್ಲಿ ತಡೆಗೋಡೆ ಕಳಪೆ ಕಾಮಗಾರಿ ಆಗಿದೆ ಎನ್ನುವುದು ಒಂದು ಭಾಗ. ಆದರೆ ಆ ಕಾಮಗಾರಿ ಅವೈಜ್ಞಾನಿಕವಾಗಿದೆ ಎನ್ನುವುದು ಇನ್ನೊಂದು ಭಾಗವಾಗಿದೆ. ಎಲ್ಲಿ ತಿರುವು ಕೊಡಬೇಕು, ಎಲ್ಲಿ ಚರಂಡಿಯಾಗಬೇಕು. ಎಲ್ಲಿ ತಿರುವು ಕೊಟ್ಟರೆ ಅಪಘಾತಗಳನ್ನು ಕಡಿಮೆಯಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್‌ಗಳೊಂದಿಗೆ ಮುಂದಿನ ವಾರ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net