ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಆಯೋಜಿಸಿದ್ದ ಜಾನಪದ ಸಾಹಿತಿಗಳ ಬದುಕು-ಬರಹ ವಿಚಾರ ಸಂಕಿರಣವನ್ನು ಜಾನಪದ ವಿದ್ವಾಂಸ ಡಾ. ಬಸವರಾಜ ನೆಲ್ಲಿಸರ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಇಮ್ರಾನ್ ಅಹ್ಮದ್ ಬೇಗ್, ಪದ್ಮಾವತಿ, ಆರ್.ನಾಗೇಶ್, ರಮೇಶ್ ಇತರರಿದ್ದರು.
ತರೀಕೆರೆ: ಜಾನಪದ ಕಲೆ, ಸಾಹಿತ್ಯ, ಸಂಗೀತ ಮನುಷ್ಯನ ವ್ಯಕ್ತಿತ್ವ ವಿಕಾಸಗೊಳಿಸಲು ನೆರವಾಗುತ್ತದೆ ಎಂದು ಜಾನಪದ ವಿದ್ವಾಂಸ ಡಾ. ಬಸವರಾಜ ನೆಲ್ಲಿಸರ ಹೇಳಿದರು.
ಲಕ್ಕವಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಜಾನಪದ ಸಾಹಿತಿಗಳ ಬದುಕು-ಬರಹ ವಿಚಾರ ಸಂಕಿರಣ ಹಾಗೂ ಜಾನಪದ ಗೀತ ಗಾಯನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕೇವಲ ಮನರಂಜನೆಯಾಗಿ ಮಾತ್ರವಲ್ಲದೆ ಸಮಾಜದ ಅಂಕುಡೊಂಕು ತಿದ್ದಲು, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿಕರು ಮತ್ತು ಮಹಿಳೆಯರಿಂದ ಜನ್ಮತಳೆದ ಜಾನಪದ ಕಲೆ, ಸಾಹಿತ್ಯ, ಸಂಗೀತ ಸದೃಢವಾಗಿ ಬೆಳೆದಿದೆ. ಯುವಪೀಳಿಗೆ ನಮ್ಮ ಸೊಗಡಿನ ಕಲೆಯನ್ನು ಪೋಷಿಸಿ ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಹೊಣೆಗಾರಿಕೆ ಹೊರಬೇಕಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಭಾರತೀಯ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಜಾನಪದ ಸಂಸ್ಕೃತಿಯ ಕೊಡುಗೆ ಅನನ್ಯ. ಎಲ್ಲ ಕಲೆಗಳ ತಾಯಿಬೇರಾದ ಜಾನಪದಕ್ಕೆ ನೈತಿಕ ಮತ್ತು ಜಾತ್ಯತೀತ ಮನೋಭಾವನೆ ಬೆಳೆಸುವ ಶಕ್ತಿ ಇದೆ. ಜಾನಪದ ಮನಸ್ಸಿಗೆ ಶಾಂತಿ, ನೆಮ್ಮದಿ, ಮನರಂಜನೆ ನೀಡಿ ಸಾಮಾಜಿಕ ಪ್ರಜ್ಞೆ ಮೂಡಿಸುತ್ತದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಜಾನಪದಕ್ಕೆ ಜಾತಿ ಕಟ್ಟುಪಾಡುಗಳಿಲ್ಲ. ಸಮಾಜ ಒಗ್ಗೂಡಿಸುವ ಶಕ್ತಿ ಇದೆ. ಜಾನಪದ ನಾಶವಾದರೆ, ದೇಶದ ಇಡೀ ಸಂಸ್ಕೃತಿ ನಾಶವಾಗಲಿದೆ ಎಂದು ತಿಳಿಸಿದರು.
ಸಾಹಿತಿ ಸಿ.ಚಕ್ರವರ್ತಿ ಅವರಿಗೆ ಜಾನಪದ ಲೋಕ ಸಂಸ್ಥಾಪಕ ಡಾ. ಎಚ್.ಎಲ್.ನಾಗೇಗೌಡ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾವಿದರು ನಡೆಸಿಕೊಟ್ಟ ಜಾನಪದ ಗೀತ ಗಾಯನ ನೆರೆದಿದ್ದವರ ಮನರಂಜಿಸಿತು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಆರ್.ನಾಗೇಶ್, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಕಲಾವಿದ ಚಿಕ್ಕನಲ್ಲೂರು ಜಯಣ್ಣ, ಪ್ರಮುಖರಾದ ರಮೇಶ್, ತಿಪ್ಪೇಶ್, ಸೋಮಶೇಖರ್, ಪಾಂಡುರಂಗ, ಸೀನೋಜಿರಾವ್, ಪಾಂಡುರಂಗ ಜಾಧವ್, ಕೃಷ್ಣಪ್ಪ ಮತ್ತಿತರರಿದ್ದರು.