ಬಾಳೆಹೊನ್ನೂರು: ಇರಾನ್-ಇಸ್ರೇಲ್ ನಡುವಿನ ಯುದ್ಧದಲ್ಲಿ ದುಬೈನಲ್ಲಿ ಕನ್ನಡಿಗರು ಸಿಲುಕಿರುವುದು ಕಠಿಣ ಪರಿಸ್ಥಿತಿಯಾಗಿದೆ. ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರಂಭಾಪುರಿ ಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಬೈನಿಂದ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ನಾನು ದೆಹಲಿಗೆ ಹೋಗುತ್ತಿದ್ದು, ಸಂಬಂಧಿಸಿದ ಮಂತ್ರಾಲಯ, ಮಂತ್ರಿಗಳ ಜತೆಗೆ ಮಾತುಕತೆ ನಡೆಸಿ ಕನ್ನಡಿಗರನ್ನು ವಾಪಸ್ ಕರೆತರಲು ಗಂಭೀರ ಪ್ರಯತ್ನ ಮಾಡುವುದಾಗಿ ಹೇಳಿದರು.
ಅತ್ಯಂತ ಅಪಾಯಕಾರಿ ಪರಿಸ್ಥಿತಿ, ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಂತಹ ಸರ್ಕಾರ ನಮ್ಮದು. ಸದ್ಯ ಇರುವ ಪರಿಸ್ಥಿತಿ ಬಗ್ಗೆಯೂ ಪರಿಶೀಲಿಸಲಿದ್ದೇವೆ. ಆದರೆ ಬಹಳ ಪ್ರಕ್ಷುಬ್ಧ ಪರಿಸ್ಥಿತಿಯಿದ್ದು ವಿಮಾನವನ್ನು ಟೇಕಾಫ್ ಮಾಡುವುದು ಅಪಾಯಕಾರಿಯಾದ ಕಾರಣ ಅಲ್ಲಿನ ತಾಂತ್ರಿಕ ವ್ಯಕ್ತಿಗಳು ನಮಗೆ ಏನು ಸಲಹೆ ಕೊಡುತ್ತಾರೆಯೋ ಅದರ ಆಧಾರದ ಮೇಲೆ ಆದಷ್ಟು ಬೇಗ ಎಲ್ಲರನ್ನೂ ಸುರಕ್ಷಿತವಾಗಿ ಕರೆದುಕೊಂಡು ಬರುವುದು ನಮ್ಮ ಆದ್ಯತೆಯಾಗಿದೆ ಎಂದರು.
ಎಂಎಲ್ಸಿ ಎಸ್.ಎಲ್.ಬೋಜೇಗೌಡ ಸಹ ಅಲ್ಲಿ ಸಿಲುಕಿಕೊಂಡಿದ್ದು ಅವರೂ ನಮ್ಮ ಸ್ನೇಹಿತರು, ಅವರೊಂದಿಗೆ ಅಲ್ಲಿರುವ ಎಲ್ಲ ಪ್ರಯಾಣಿಕರನ್ನು ಕರೆತರಲಾಗುವುದು. ಆದಷ್ಟು ಬೇಗ ಅಲ್ಲಿರುವವರು ಸುರಕ್ಷಿತವಾಗಿ ತಾಯ್ನಡಿಗೆ ಬರಬೇಕು ಎಂಬುದು ನಮ್ಮ ಆಶಯ ಎಂದರು.