ಕಡೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 40 ಲಕ್ಷ ರೂ ವೆಚ್ಚದ ಪ್ರಯೋಗಾಲಯ ಕಟ್ಟಡದ ಕಾಮಗಾರಿಗೆ ಶಾಸಕ ಕೆ.ಎಸ್ ಆನಂದ್ ಭೂಮಿಪೂಜೆ ನೆರವೇರಿಸಿದರು. ಆಸಂದಿ ಕಲ್ಲೇಶ್, ಡಾ.ಶ್ರೀನಿವಾಸ್, ಡಾ.ಚಂದಾ ಮತ್ತಿತರಿದ್ದರು
Published on:
Copied
Follow Us
ಕಡೂರು: ಪಟ್ಟಣದಲ್ಲಿ ಶೀಘ್ರದಲ್ಲಿ ತಾಯಿ-ಮಗು ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ 40 ಲಕ್ಷ ರೂ. ವೆಚ್ಚದ ಪ್ರಯೋಗಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, 2014ರಲ್ಲಿ ತಾಯಿ-ಮಗು ಆಸ್ಪತ್ರೆ ಮಂಜೂರಾಗಿತ್ತು. ಜಾಗದ ಸಮಸ್ಯೆಯಿಂದ ಮಂಜೂರಾತಿ ರದ್ದುಗೊಂಡಿತ್ತು. ಈಗ ಆಸ್ಪತ್ರೆ ನಿರ್ಮಾಣಕ್ಕೆ ಗಾಣದಾಳು ಸಮೀಪ 5 ಎಕರೆ ಜಾಗ ಸಿದ್ದವಾಗಿದೆ. ಇಲ್ಲಿನ ಆಸ್ಪತ್ರೆ ವೈದ್ಯರು ಕೇಂದ್ರ ಸರ್ಕಾರದ ಗೈಡ್‌ಲೈನ್ ಅನುಸಾರವಾಗಿ ಮೂರ್ನಾಲ್ಕು ತಿಂಗಳಿಗೆ ಕನಿಷ್ಟ 100 ಹೆರಿಗೆ ಪ್ರಕರಣ ಮಾಡಿದಲ್ಲಿ ಕಡೂರು ಪಟ್ಟಣಕ್ಕೆ ತಾಯಿ-ಮಗು ಆಸ್ಪತ್ರೆ ತರಲು ಅನುಕೂಲವಾಗಲಿದೆ ಎಂದರು.
ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್(ಬಿಪಿಎಚ್‌ಯು) ರಾಷ್ಟ್ರೀಯ ಆರೋಗ್ಯ ಯೋಜನೆಗಳ ಪ್ರಯೋಗಾಲಯಗಳನ್ನು ಒಂದೇ ಕೇಂದ್ರದಲ್ಲಿ ಏಕೀಕರಿಸುವ ಉದ್ದೇಶದಿಂದ 40 ಲಕ್ಷ ರೂ. ವೆಚ್ಚದಲ್ಲಿ ನೂತನ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ದೊಡ್ಡ ಕೇಂದ್ರವಾಗಿರುವ ಸಾರ್ವಜನಿಕ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಹೊರ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ನುರಿತ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಶೀಘ್ರದಲ್ಲೇ ಬೀರೂರು ಆಸ್ಪತ್ರೆಗೆ 4 ಬೆಡ್‌ಗಳ ಡಯಾಲಿಸಿಸ್ ಘಟಕ ಆರಂಭಿಸಲಾಗುತ್ತದೆ ಎಂದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಚಂದಾ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಡಾ.ಗುರುಮೂರ್ತಿ, ಡಾ.ಕಿರಣ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.