ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠದಿಂದ ವಿದ್ಯಾರ್ಥಿ ವೇತನದ ಚೆಕ್ ವಿತರಣಾ ಕಾರ್ಯಕ್ರಮವನ್ನು ಶಂ.ನ.ಶೇಷಗಿರಿ ಉದ್ಘಾಟಿಸಿದರು. ವಿನಯ್, ಡಾ. ಲಕ್ಷ್ಮೀನಾರಾಯಣ್ ಹಾಗೂ ವಿದ್ಯಾರ್ಥಿಗಳು ಇದ್ದರು.
ಶೃಂಗೇರಿ:ಸುವರ್ಣಭಾರತಿ ಹಾಗೂ ವಜ್ರಭಾರತಿ ಮಹೋತ್ಸವ ಅಂಗವಾಗಿ ಶೃಂಗೇರಿ ಶಾರದಾಪೀಠವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅನನ್ಯ ಎಂದು ಜಯಭಾರತೀ ವಿದ್ಯಾಲಯ ಮುಖ್ಯಶಿಕ್ಷಕ ವಿನಯ್ ತಿಳಿಸಿದರು.
ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜಯಭಾರತಿ ವಿದ್ಯಾಲಯದ ಆವರಣದಲ್ಲಿ ಶನಿವಾರ ಶ್ರೀ ಶಾರದಾ ಪೀಠದಿಂದ ವಿದ್ಯಾರ್ಥಿ ವೇತನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೈಕ್ಷಣಿಕ ಪ್ರಗತಿಗಾಗಿ ಶ್ರೀಮಠವು ಜಯಭಾರತೀ ವಿದ್ಯಾಲಯಕ್ಕೆ ಬಸ್ ಸೌಲಭ್ಯ, ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ತರಗತಿವಾರು ವಿದ್ಯಾರ್ಥಿಗಳಿಗೆ ಸುಮಾರು 11 ಲಕ್ಷ ರೂ.ಗಳನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಅವರು ಅನುಗ್ರಹಿಸಿ ಶಾಲೆಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಆಪ್ತಸಹಾಯಕ ಶಂ.ನ.ಕೃಷ್ಣಮೂರ್ತಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಲವು ಪಾಲಕರಿಗೆ ಶೈಕ್ಷಣಿಕ ವೆಚ್ಚ ಭರಿಸುವುದು ಕಷ್ಟಕರ. ಹಾಗಾಗಿ ಉಭಯ ಶ್ರೀಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಶ್ರೀಮಠದಿಂದ ಆರ್ಥಿಕ ಸಹಕಾರ ನೀಡುತ್ತಿದ್ದು ಮಕ್ಕಳು ಶಿಕ್ಷಣದಲ್ಲಿ ಹೆಚ್ಚು ಪ್ರಗತಿ ಹೊಂದುವ ಆಶಯ ಅವರಲ್ಲಿದೆ ಎಂದರು.
ಪ್ರತಿಭೆ ಸರ್ವರಲ್ಲೂ ಇದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಉದ್ಯೋಗ ಪಡೆದ ಬಳಿಕ ಬಡ ಮಕ್ಕಳ ಶಿಕ್ಷಣ ಪ್ರಗತಿಗಾಗಿ ಸಹಕಾರ ನೀಡಬೇಕು ಎಂದರು. ಸುಮಾರು 75 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್‌ಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮೀನಾರಾಯಣ್, ಕೋಶಾಧ್ಯಕ್ಷ ವಿಶ್ವೇಶ್ವರ ಭಟ್ ಇದ್ದರು.