ಮ್ಯಾಮ್ಕೋಸ್‌ಗೆ 9.53 ಕೋಟಿ ರೂ. ನಿವ್ವಳ ಲಾಭ (MAMCOS, )

ತರೀಕೆರೆಯಲ್ಲಿ ಆಯೋಜಿಸಿದ್ದ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆಯನ್ನು ಎಚ್.ಎಸ್.ಮಹೇಶ್ ಹುಲ್ಕುಳಿ ಉದ್ಘಾಟಿಸಿದರು. ಶ್ರೀಕಾಂತ್ ಬರುವೆ, ಟಿ.ಎಲ್.ರಮೇಶ್, ಯಡಗೆರೆ ಸುಬ್ರಹ್ಮಣ್ಯ, ಬಿ.ಸಿ.ನರೇಂದ್ರ, ರತ್ನಾಕರ್, ಪ್ರಸನ್ನ, ಜಯಶ್ರೀ ಇತರರಿದ್ದರು.
ತರೀಕೆರೆಯಲ್ಲಿ ಆಯೋಜಿಸಿದ್ದ ಮ್ಯಾಮ್ಕೋಸ್ ಷೇರುದಾರರ ಸಮಾಲೋಚನಾ ಸಭೆಯನ್ನು ಎಚ್.ಎಸ್.ಮಹೇಶ್ ಹುಲ್ಕುಳಿ ಉದ್ಘಾಟಿಸಿದರು. ಶ್ರೀಕಾಂತ್ ಬರುವೆ, ಟಿ.ಎಲ್.ರಮೇಶ್, ಯಡಗೆರೆ ಸುಬ್ರಹ್ಮಣ್ಯ, ಬಿ.ಸಿ.ನರೇಂದ್ರ, ರತ್ನಾಕರ್, ಪ್ರಸನ್ನ, ಜಯಶ್ರೀ ಇತರರಿದ್ದರು.
Published on
ತರೀಕೆರೆ:  ಅಡಿಕೆ ನೇರ ಖರೀದಿಯನ್ನು 2017ನೇ ಸಾಲಿನಿಂದ ಆರಂಭಿಸಿದ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ 13 ಶಾಖೆ ತೆರೆದಿದ್ದು 10 ಕಡೆ ಸ್ವಂತ ಕಟ್ಟಡ ಹೊಂದಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ತಿಳಿಸಿದರು.
ಮ್ಯಾಮ್ಕೋಸ್ ಶಾಖಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಕಾರ್ಯಾರಂಭ ಮಾಡಿದ ಸಂಸ್ಥೆ ಅಂದಿನಿಂದಲೂ ಲಾಭದಲ್ಲೇ ಮುಂದುವರಿದಿದೆ. ಪ್ರಸಕ್ತ ಸಾಲಿನಲ್ಲಿ 1,636 ಕೋಟಿ ರೂ. ವಹಿವಾಟು ನಡೆಸಿರುವ ಮ್ಯಾಮ್ಕೋಸ್ 2025-26ನೇ ಸಾಲಿನಲ್ಲಿ 9.53 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ಠೇವಣಿದಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮಾನದಂಡದಂತೆ ಬಡ್ಡಿ ನೀಡುತ್ತಿರುವ ಸಂಸ್ಥೆ, ಅಡಿಕೆ ಕೊಯ್ಲು ಅಥವಾ ಸಂಸ್ಕರಣೆ ವೇಳೆ ಅವಘಡಕ್ಕೆ ತುತ್ತಾಗಿ ಗಾಯಗೊಂಡವರಿಗೆ 2 ಲಕ್ಷ ರೂ., ಮೃತಪಟ್ಟವರಿಗೆ 7 ಲಕ್ಷ ರೂ. ಪರಿಹಾರ ನೀಡುವ ವಿನೂತನ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿ ಜಾರಿಗೊಳಿಸಿ ಬೆಳೆಗಾರರ ಹಿತ ಕಾಯುವ ಕೆಲಸ ಮಾಡುತ್ತಿದೆ ಎಂದರು.
ಬೆಳೆಗಾರ ರೇವಣ್ಣ ಮಾತನಾಡಿ, ಮಾರಾಟದ ವೇಳೆ ಜರಡಿ ಹಿಡಿದು ಹೊರತೆಗೆಯುವ ಅಡಿಕೆ ಪುಡಿ ಬೆಳೆಗಾರರಿಗೆ ವಾಪಾಸ್ಸು ನೀಡುತ್ತಿಲ್ಲ. ಹೀಗಾಗುತ್ತಿರುವುದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.     
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಮ್ಯಾಮ್ಕೋಸ್ ನಿರ್ದೇಶಕ ಡಾ.ಆರ್.ದೇವಾನಂದ್ ಹಾಗೂ ಇನ್ನಿತರ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗುಂಪು ವಿಮಾಯೋಜನೆಯಡಿ  ಅಡಿಕೆ ಕೊಯ್ಲಿನ ವೇಳೆ ಅವಘಡಕ್ಕೆ ತುತ್ತಾದ ಕೂಲಿ ಕಾರ್ಮಿಕ ಕುಮಾರಪ್ಪಗೆ 1.50 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ನಿರ್ದೇಶಕರಾದ ಟಿ.ಎಲ್.ರಮೇಶ್, ಯಡಗೆರೆ ಸುಬ್ರಹ್ಮಣ್ಯ, ಬಿ.ಸಿ.ನರೇಂದ್ರ, ಎ.ಸುರೇಶ್‌ಚಂದ್ರ, ರತ್ನಾಕರ್, ಪ್ರಸನ್ನ, ಧರ್ಮೇಂದ್ರ, ಭರ್ಮಪ್ಪ, ಜಯಶ್ರೀ, ಕೆ.ಎನ್.ಕೃಷ್ಣಮೂರ್ತಿ, ಶ್ರೀನಿವಾಸ್, ವಿರೂಪಾಕ್ಷಪ್ಪ, ತರೀಕೆರೆ ಶಾಖಾ ವ್ಯವಸ್ಥಾಪಕ ಎಲ್.ಎಸ್.ಪ್ರದೀಪ್‌ಕುಮಾರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net