ಲೋಕಾ ಎಂಟ್ರಿಯಿಂದ ಮಲೆನಾಡಿಗೆ ಸಂಕಷ್ಟ

ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಮದಲ್ಲಿ ಒತ್ತುವರಿಗೊಂಡ ಸರ್ಕಾರಿ ಜಮೀನನ್ನು ಲೋಕಾಯುಕ್ತ ಅಧಿಕಾರಿಗಳು ಸರ್ವೇ ನಡೆಸುತ್ತಿರುವುದು.
ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಮದಲ್ಲಿ ಒತ್ತುವರಿಗೊಂಡ ಸರ್ಕಾರಿ ಜಮೀನನ್ನು ಲೋಕಾಯುಕ್ತ ಅಧಿಕಾರಿಗಳು ಸರ್ವೇ ನಡೆಸುತ್ತಿರುವುದು.
Published on
ಕೊಪ್ಪ: ಅರಣ್ಯ ಕಾಯ್ದೆ, ಭೂ ಕಬಳಿಕೆ ನಿಷೇಧ ಕಾಯ್ದೆ, ಕಂದಾಯ ಇಲಾಖೆಯ ತೊಡಕುಗಳು, ಕಾಡು ಪ್ರಾಣಿಗಳ ಹಾವಳಿ, ಹಸಿರು ಪೀಠ ಮತ್ತು ಸರ್ಕಾರಗಳು ಆಗಾಗ ತೆಗೆದುಕೊಳ್ಳುವ ನಿರ್ಧಾರದಿಂದ ಮಲೆನಾಡ ವಾಸಿಗಳು ರೋಸಿ ಹೋಗಿದ್ದಾರೆ. ಇದರ ನಡುವೆ ಲೋಕಾಯುಕ್ತ ಒತ್ತುವರಿ ಖುಲ್ಲಾಪಡಿಸಲು ಎಂಟ್ರಿ ಆಗಿರುವುದರಿಂದ ಮಲೆನಾಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಮದ ಸರ್ವೇ ನಂ. 314ರಲ್ಲಿ ವ್ಯಕ್ತಿಯೊಬ್ಬರ ಅರ್ಜಿ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಒತ್ತುವರಿ ಪ್ರದೇಶದ ಸರ್ವೇ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತ ಅರ್ಜಿ ಸಂಬಂಧ ಕಾರ್ಯಾಚರಣೆಗೆ ಬಂದಿರುವುದು ಎನ್ನಲಾಗಿದೆ.
ದಿನನಿತ್ಯ ಅರಣ್ಯ ಇಲಾಖೆ ಹಾಗೂ ಕಾಡು ಪ್ರಾಣಿಗಳ ಜತೆಯಲ್ಲಿ ಹೋರಾಟ ನಡೆಸಿಕೊಂಡು ಸಾಗುತ್ತಿರುವ ಬೆನ್ನಲ್ಲೇ ಲೋಕಾಯುಕ್ತಕ್ಕೆ ಒತ್ತುವರಿ ಪ್ರಕರಣಗಳು ದಾಖಲಾಗಿ ಅಧಿಕಾರಿಗಳು ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಇಲ್ಲಿನ ರೈತರ ಆತಂಕಕ್ಕೆ ಕಾರಣವಾಗಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗದ ರೈತರೇ ಹೆಚ್ಚು. ಸರ್ಕಾರ ಒಂದೆರಡು ಎಕರೆ ಮಂಜೂರು ಮಾಡಿದ್ದರೆ ಮತ್ತೊಂದೆರಡು ಎಕರೆ ದಶಕಗಳ ಹಿಂದಿನಿಂದ ಒತ್ತುವರಿ ಮಾಡಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತ ಜೀವನ ರೂಪಿಸಿಕೊಂಡಿದ್ದಾರೆ.
ಹಳ್ಳಿಗಳಲ್ಲಿ ಅಕ್ಕಪಕ್ಕದ ರೈತರ ನಡುವೆ ಇರುವ ಕಲಹ, ಹೊಟ್ಟೆಕಿಚ್ಚು ಇತ್ಯಾದಿ ಕಾರಣಗಳಿಂದ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಮಲೆನಾಡಿನ ಮಣ್ಣನ್ನು ಸ್ಪರ್ಶಿಸುವಂತಾಗಿದೆ. ಇದರಿಂದ ನೆರೆಹೊರೆಯವರ ಸಮಸ್ಯೆ ಊರಿನ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ವ್ಯಕ್ತಿಯೊಬ್ಬನ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಊರಿನವರೆಲ್ಲರೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚುತ್ತಿದೆ.
 2006ರಲ್ಲಿ ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿಯನ್ನು ತಡೆಯಲು ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಇದನ್ನು ಮಲೆನಾಡಿನಲ್ಲಿ ದ್ವೇಷಕ್ಕಾಗಿ ಒಬ್ಬರ ಮೇಲೆ ಇನ್ನೊಬ್ಬರು ದುರುಪಯೋಗ ಮಾಡಿಕೊಂಡಿದ್ದೇ ಹೆಚ್ಚು.! ಸರ್ಕಾರ ಈ ಕಾಯ್ದೆಯನ್ನು ಹಿಂತೆಗೆದುಕೊಂಡಿದೆ. ಈ ಲೋಕಾಯುಕ್ತ ಅಸವನ್ನು ಸ್ವತಃ ರೈತರೇ ಪ್ರಯೋಗ ಮಾಡಲು ಮುಂದಾಗಿರುವುದು ದುರದೃಷ್ಟಕರ ಸಂಗತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net