ನಟ ಸಂಚಾರಿ ವಿಜಯ್ ಸಮಾಧಿ ಸ್ಮಾರಕವಾಗಲಿ

 ಕಡೂರಿನ ಪಂಚನಹಳ್ಳಿಯಲ್ಲಿ ನಡೆದ ಸಂಚಾರಿ ವಿಜಯ್ ಜನ್ಮದಿನಾಚರಣೆಯನ್ನು  ಪಿ.ಸಿ.ಪ್ರಸನ್ನ ಉದ್ಘಾಟಿಸಿದರು.
ಕಡೂರಿನ ಪಂಚನಹಳ್ಳಿಯಲ್ಲಿ ನಡೆದ ಸಂಚಾರಿ ವಿಜಯ್ ಜನ್ಮದಿನಾಚರಣೆಯನ್ನು ಪಿ.ಸಿ.ಪ್ರಸನ್ನ ಉದ್ಘಾಟಿಸಿದರು.
Published on
ಕಡೂರು: ನಟ ಸಂಚಾರಿ ವಿಜಯ್ ಸಮಾಧಿ ಸ್ಮಾರಕವಾಗಬೇಕು ಎಂಬುದು ಪಂಚನಹಳ್ಳಿ ಜನರ ಆಶಯವಾಗಿದೆ ಎಂದು ಇಂದಿರಾ ಕ್ಯಾಂಟಿನ್ ಮೇಲ್ವಿಚಾರಣೆ ಸಮಿತಿ ರಾಜ್ಯಾಧ್ಯಕ್ಷ ಪಿ.ಸಿ.ಪ್ರಸನ್ನ ಹೇಳಿದರು.
ತಾಲೂಕಿನ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಸ್ಪೋಟ್ಸ್ ಅಸೋಸಿಯೇಷನ್, ಕಲ್ಯಾಣ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ನಡೆದ ಸಂಚಾರಿ ವಿಜಯ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ ಅನುದಾನ ತಂದು ಸಂಚಾರಿ ವಿಜಯ್ ಸಮಾಧಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಂಚಾರಿ ವಿಜಯ್ ಹೆಸರಿನಲ್ಲಿ ರಂಗ ಮಂದಿರ ನಿರ್ಮಾಣ ಮಾಡಲು ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.
ಸ್ನೇಹ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಕೆ.ಒ.ರಾಘವೇಂದ್ರ ಮಾತನಾಡಿ, ಪಂಚನಹಳ್ಳಿ ಗ್ರಾಮವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವ್ಯಕ್ತಿ ಸಂಚಾರಿ ವಿಜಯ್. ವಿಜಯ್ ಅವರ ಚಲನಚಿತ್ರಗಳಲ್ಲಿ ಕೇವಲ ನಾಯಕ ನಟನ ಪಾತ್ರ ನಿರ್ವಹಿಸಲಿಲ್ಲ. ನಮ್ಮೊಳಗಿನ ತುಡಿತಗಳನ್ನು ಹೊರಹಾಕುವಂತಹ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಜನಮನಗೆದ್ದ ಅಪ್ರತಿಮ ಪ್ರತಿಭೆಯಾಗಿದ್ದರು. ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು ಗ್ರಾಮದ ಯುವಕರು ಮುಂದಾಗಬೇಕು. ಸಂಚಾರಿ ವಿಜಯ್ ಹೆಸರಿನಲ್ಲಿ ನಿರಂತವಾಗಿ ಸಮಾಜಮುಖಿ ಕಾರ್ಯಗಳು ನಡೆಯಬೇಕು ಎಂದರು.
ಸಂಚಾರಿ ವಿಜಯ್ ಸಹೋದರ ಬಿ.ವಿರೂಪಾಕ್ಷ ಮಾತನಾಡಿ, ಪಂಚನಹಳ್ಳಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಾಗ ನಮ್ಮನ್ನು ಸಾಕಿ ಸಲುಹಿದ್ದು ಪಂಚನಹಳ್ಳಿ ಜನತೆ. ಇಲ್ಲಿನ ಮಣ್ಣಿನ ಗುಣದಿಂದಲೇ ವಿಜಯ್ ಅಷ್ಟು ಎತ್ತರಕ್ಕೆ ಬೆಳೆದ ಎಂದರೆ ತಪ್ಪಾಗಲಾರದು. ವಿಜಯ್ ಕೇವಲ ನಟನಾಗಿರಲಿಲ್ಲ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕರೊನಾ ವೇಳೆಯಲ್ಲಿ ನಾವು ಪ್ರಾಣ ಭೀತಿಯಿಂದ ಮನೆ ಸೇರಿಕೊಂಡರೆ ವಿಜಯ್ ಅನೇಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದ. ಆತನ ಈ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲು ಗ್ರಾಮದ ಯುವಕರು ಮುಂದಾಗಬೇಕು ಎಂದರು.
ನಿವೃತ್ತ ಯೋಧ ಪಿ.ವಿ.ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಲಾಯಿತು. ನಿವೃತ್ತ ಪ್ರಾಚಾರ್ಯ ವೈ.ಎಂ.ಚನ್ನಯ್ಯ, ನೃತ್ಯ ನಿರ್ದೇಶಕ ಅರುಣ್ ಮಾಸ್ಟರ್, ಕಿರುತೆರೆ ನಟ ಎನ್.ಡಿ.ರೇವಣ್ಣ, ಕಲ್ಯಾಣ ಕರ್ನಾಟಕ ವೇದಿಕೆ ಸಂಸ್ಥಾಪಕ ದುಮ್ಮೇನಹಳ್ಳಿ ಅಶೋಕ್, ಜಿಲ್ಲಾಧ್ಯಕ್ಷ ರಂಗನಾಥ್,ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ,ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಎಸ್.ಟಿ.ಶ್ರೀನಿವಾಸ್,ಮಹೇಶ್ವರಪ್ಪ, ಅಶೋಕ್ ಶೆಟ್ಟಿ,ಗುಡಿಗೌಡರಾದ ಪಿ.ಎಂ.ಉಮಾಪತಿ, ಯುವ ಮುಖಂಡ ಪಿ.ಈ.ಸಂಜಯ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net