ಅಲೆಮಾರಿ ಜನಾಂಗ ಮುಖ್ಯವಾಹಿನಿಗೆ ಬರಲಿ

ಕಡೂರು ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕೆ.ಟಿ.ಮಹೇಶ್ ಅವರನ್ನು ಕೆ.ರವೀಂದ್ರ ಶೆಟ್ಟಿ ಅಭಿನಂದಿಸಿದರು. ಅಶೋಕ್, ಮಧು, ಮಂಜುನಾಥ್, ಮೂಡಲಗಿರೀಶ್ ಮತ್ತಿತರರಿದ್ದರು.
ಕಡೂರು ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕೆ.ಟಿ.ಮಹೇಶ್ ಅವರನ್ನು ಕೆ.ರವೀಂದ್ರ ಶೆಟ್ಟಿ ಅಭಿನಂದಿಸಿದರು. ಅಶೋಕ್, ಮಧು, ಮಂಜುನಾಥ್, ಮೂಡಲಗಿರೀಶ್ ಮತ್ತಿತರರಿದ್ದರು.
Published on
 ಕಡೂರು: ಅಲೆಮಾರಿ ಸಮುದಾಯಗಳ ಬದುಕು ಹಸನುಗೊಳ್ಳಬೇಕೆಂಬುದು ಒಕ್ಕೂಟದ ಉದ್ದೇಶ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ನ್ಯಾಯದ ವ್ಯವಸ್ಥೆಯಡಿ ಅಲೆಮಾರಿ ಸಮುದಾಯಗಳು ಶೋಷಣೆಗೆ ಒಳಗಾಗುತ್ತಿರುವುದು ದುರಂತದ ಸಂಗತಿ. ಸರ್ಕಾರ ಕೂಡ ಗಂಭೀರ ಸಮಸ್ಯೆಗಳನ್ನು ಪರಿಗಣಿಸುವಲ್ಲಿ ವಿಲವಾಗಿದೆ. ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವಾಗಬೇಕಿದೆ. ಸರ್ಕಾರದ ದಾಖಲಾತಿ ಪ್ರಕಾರ ಜನನ-ಮರಣಗಳ ನೋಂದಣಿ ಪತ್ರ, ಜಾತಿ ಪ್ರಮಾಣ ಪತ್ರಗಳ ನೀಡುವಿಕೆ ಹಾಗೂ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಒತ್ತು ನೀಡಬೇಕಿದೆ ಎಂದರು.
ಈಗಾಗಲೇ ರಾಜ್ಯಾದ್ಯಂತ ವಸತಿರಹಿತರಾಗಿ ವಾಸಿಸುತ್ತಿರುವ ಅಲೆಮಾರಿ ಸಮುದಾಯಕ್ಕೆ ನಿವೇಶನದ ಬೇಡಿಕೆ ಹೆಚ್ಚಿದೆ. ಮನೆ ಕಟ್ಟಿಕೊಳ್ಳುವವರಿಗೆ 5 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ಏರಿಕೆ, ಅಂತ್ಯಸಂಸ್ಕಾರ ನಡೆಸಲು ರುದ್ರಭೂಮಿಯ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ 10 ಎಕರೆ ಜಾಗವನ್ನು ಸರ್ಕಾರ ಮೀಸಲಿಡಬೇಕು. ಪ್ರತಿ ಜಿಲ್ಲೆಯಲ್ಲೂ ಅಲೆಮಾರಿ ಸಮುದಾಯಕ್ಕಾಗಿಯೇ ವಿದ್ಯಾರ್ಥಿ ಭವನಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯಾದ್ಯಂತ ಒಕ್ಕೂಟದ ಅಡಿಯಲ್ಲಿ ಸಂಘಟನೆಯು ಕಾರ್ಯನಿರ್ವಹಿಸುತ್ತಿದ್ದು ಚಿಕ್ಕಮಗಳೂರು ಘಟಕವನ್ನು ನೂತನವಾಗಿ ರಚಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಟಿ.ಮಹೇಶ್ ಮಾತನಾಡಿ, ಜಿಲ್ಲಾದ್ಯಂತ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯಗಳ ಸಂಘಟನೆಗೆ ಒತ್ತು ನೀಡಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ರಚಿಸಲಾಗುತ್ತದೆ ಎಂದು ಹೇಳಿದರು. ರಾಜ್ಯ ಉಪಾಧ್ಯಕ್ಷ ಮಧು ಮಲ್ಲಾಘಟ್ಟ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣ , ಆನಂದ್, ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥ್, ಮೂಡಲಗಿರೀಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net