ಮೂಡಿಗೆರೆ ಬ್ಲಾಕ್ ಕಾಂಗ್ರೆಸ್‌ಗೆ ಕೆ.ಎ.ರವಿ ಹಂಗಾಮಿ ಅಧ್ಯಕ್ಷ

ಕೆ.ಎ.ರವಿ.
ಕೆ.ಎ.ರವಿ.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್
  • ಬಣಕಲ್ ಹೋಬಳಿ ಕಾಂಗ್ರೆಸ್‌ನಿಂದ
ಮೂಡಿಗೆರೆ: ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಶಾಸಕಿ ನಯನಾ ಮೋಟಮ್ಮ ಅವರ ನಡುವಿನ ಮುನಿಸು ಮುಂದುವರಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಜತೆಗೆ ಕೆ.ಎ.ರವಿ ಎಂಬುವರನ್ನು ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. 
ಗುರುವಾರ ಗೋಣಿಬೀಡು ಹೋಬಳಿ ಕಾಂಗ್ರೆಸ್‌ನಿಂದ ಕಾರ್ಯಕರ್ತರ ಸಮಾವೇಶ ಮತ್ತು ಎಸ್‌ಐಆರ್ ಕಾರ್ಯಾಗಾರ ನಡೆದಿತ್ತು. ಈ ಸಮಾವೇಶಕ್ಕೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ, ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವೆ ಮೋಟಮ್ಮ ಗೈರಾಗಿದ್ದರು. ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಶಾಸಕಿ ನಯನಾ ಮೋಟಮ್ಮ ಅವರ ಹೆಸರು ಪ್ರಸ್ತಾಪಿಸದೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದರು.
15 ದಿನದ ಹಿಂದೆ ಬಣಕಲ್ ಹೋಬಳಿ ಕಾಂಗ್ರೆಸ್‌ನಿಂದ ಕಾರ್ಯಕರ್ತರ ಸಭೆ ಮತ್ತು ಎಸ್‌ಐಆರ್ ಕುರಿತ ಮಾಹಿತಿ ಕಾರ್ಯಾಗಾರ ನಡೆದಿತ್ತು. ಅಂದಿನ ಸಭೆಗೂ ಶಾಸಕಿ ನಯನಾ ಮೋಟಮ್ಮ ಗೈರಾಗಿದ್ದರು. ಅಲ್ಲಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿರುವ ಬಗ್ಗೆ ಹಾಗೂ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಯುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾಗಿದ್ದ ಬಿ.ಎಸ್.ಜಯರಾಮ್ ಅವರನ್ನು ವಜಾಗೊಳಿಸಿ ಶಾಸಕರ ಬೆಂಬಲಿಗ ಸಿ.ಬಿ.ಶಂಕರ್ ಅವರನ್ನು ಕಳೆದು ತಿಂಗಳು ನೇಮಿಸಲಾಗಿತ್ತು. ಇದು ಗೊಂದಲ ಸೃಷ್ಟಿಸುತ್ತಿರುವ ಬೆನ್ನಲ್ಲೆ ಈಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ನೀಡಿ ಶಾಸಕರ ಕಟ್ಟಾ ಬೆಂಬಲಿಗ ಕೆ.ಎ.ರವಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬೆಳವಣಿಗೆಯಿಂದ ಪಕ್ಷದಲ್ಲಿ ಇನ್ನಷ್ಟು ಒಡಕು ಮೂಡುವ ಸಾಧ್ಯತೆ ಹೆಚ್ಚಾಗಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಅವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ನೀಡಿರುವ ನೋಟಿಸ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ನೀವು ನಿಯಮ ಪಾಲಿಸದೆ ಶಾಸಕರು ಹಾಗೂ ಹಿರಿಯ ಮುಖಂಡರಿಗೆ ಮಾಹಿತಿ ನೀಡದೆ ಪರ್ಯಾಯ ಸಭೆಗಳನ್ನು ನಡೆಸುತ್ತಿರುವುದಾಗಿ ದೂರುಗಳು ಬಂದಿವೆ. ನೀವು ಸಭೆಯಲ್ಲಿ ಹಾಗೂ ಮಾಧ್ಯಮದಲ್ಲಿ ಬಹಿರಂಗವಾಗಿ ಸ್ಥಳೀಯ ಕಾಂಗ್ರೆಸ್ ಶಾಸಕರ ವಿರುದ್ಧವಾಗಿ ಟೀಕೆ ಮಾಡಿರುವುದು ವರದಿಯಾಗಿದೆ. ನಿಮ್ಮ ಬಹಿರಂಗ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಶಿಸ್ತು ಉಲ್ಲಂಘಿಸಿ ಹೇಳಿಕೆ ನೀಡಿರುವುದಾಗಿ ದೂರುಗಳು ಬಂದಿವೆ. ಒಂದು ವಾರದ ಒಳಗಾಗಿ ವಿವರಣೆ ನೀಡಬೇಕು ಎಂದು ಸೂಚಿಸಲಾಗಿದೆ.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net